ಬೆಂಗಳೂರು, ಆ.17-ಬಿಬಿಎಂಪಿ ಮೇಯರ್ ಚುನಾವಣೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಸವಾಲೊಡ್ಡಿದ್ದು, ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ.
ಹಾಲಿ ಮೇಯರ್ ಸಂಪತ್‍ರಾಜ್ ಅವರ ಅವಧಿ ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಯಾಗಲಿದ್ದು, ಹೊಸ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ರಾಜ್ಯಸರ್ಕಾರ ರಚನೆಯ ವೇಳೆ ಮೈತ್ರಿ ಮಾಡಿಕೊಂಡಿರುವಂತೆ ಬಿಬಿಎಂಪಿಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೂರು ವರ್ಷಗಳ ಹಿಂದೆಯೇ ಮೈತ್ರಿ ಮಾಡಿಕೊಂಡಿದೆ. ಈ ವರ್ಷ ಅದೇ ಮೈತ್ರಿ ಮುಂದುವರೆದಿದೆ. ಮೇಲ್ನೋಟಕ್ಕೆ ಈ ಬಾರಿಯೂ ಕಾಂಗ್ರೆಸ್‍ನ ಮೇಯರ್, ಜೆಡಿಎಸ್‍ನಿಂದ ಉಪಮೇಯರ್ ಆಯ್ಕೆಯಾಗುವುದು ಸುಲಭ ಸಾಧ್ಯವಿದೆ.
ಆದರೆ ಆಂತರಿಕ ಸಂಘರ್ಷಗಳು ಹೆಚ್ಚಾಗಿದ್ದು, ಬೆಂಗಳೂರಿನ ಶಾಸಕರು ಒಟ್ಟಾಗಿ ಉಪಮುಖ್ಯಮಂತ್ರಿ ಪರಮೇಶ್ವರ್ ವಿರುದ್ಧ ಸಡ್ಡು ಹೊಡೆಯುವ ಸಂಚು ರೂಪಿಸಿದ್ದಾರೆ.
ಕೊರಟಗೆರೆ ಶಾಸಕರಾದ ಪರಮೇಶ್ವರ್ ಅವರು, ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವುದು ಬಹಳಷ್ಟು ಮಂದಿ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ತರಿಸಿದೆ. ಅದರಲ್ಲೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಂತೂ ಪರಮೇಶ್ವರ್ ಅವರು ಕರೆಯುವ ಯಾವ ಸಭೆಗಳಿಗೂ ಹಾಜರಾಗದೆ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದಲೂ ದೂರವಿದ್ದು ತಮ್ಮ ಬಂಡಾಯದ ಕಹಳೆ ಊದಿದ್ದಾರೆ.
ಈ ಮೊದಲು ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಜೊತೆಯಲ್ಲಿದ್ದ ಶಾಸಕರೂ ಕೂಡ ಈಗ ದೂರವಾಗಿದ್ದಾರೆ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾದ ಮೇಲೆ ಕಾಂಗ್ರೆಸ್‍ನ ಶಾಸಕರ, ವಿಧಾನಪರಿಷತ್ ಸದಸ್ಯರ ಮಾತುಗಳಿಗೆ ಮನ್ನಣೆ ನೀಡುತ್ತಿಲ್ಲ ಎಂಬ ಆಕ್ಷೇಪಗಳು ಹೆಚ್ಚಾಗಿವೆ.
ಬಿಜೆಪಿ-ಜೆಡಿಎಸ್ ಶಾಸಕರ ಪತ್ರಗಳಿಗೆ ಸಿಗುವಷ್ಟು ಆದ್ಯತೆ ಆಡಳಿತ ಪಕ್ಷದ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್‍ನ ಶಾಸಕರ ಪತ್ರಗಳಿಗೆ ಸಿಗುತ್ತಿಲ್ಲ ಎಂಬುದು ಪ್ರಮುಖ ದೂರು.
ಈ ಅಸಮಾಧಾನವನ್ನು ಬಂಡವಾಳ ಮಾಡಿಕೊಂಡು ಕೆಲವರು ಪರಮೇಶ್ವರ್ ವಿರುದ್ಧ ಸಡ್ಡು ಹೊಡೆಯಲು ಮುಂದಾಗಿದ್ದಾರೆ. ಮೇಯರ್ ಚುನಾವಣೆಗೆ ಮೀಸಲಾತಿಯನ್ನು ಬದಲಾವಣೆ ಮಾಡಲು ಪರಮೇಶ್ವರ್ ಆಸಕ್ತಿ ತೋರಿಸಿದ್ದರು. ಆದರೆ ಅದಕ್ಕೆ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕರು ಈ ಬಾರಿ ಸಾಮಾನ್ಯವರ್ಗದ ಮಹಿಳೆಗೆ ಮೇಯರ್ ಪಟ್ಟ ದೊರೆಯಬೇಕು. ಅದಕ್ಕೆ ತಕ್ಕಂತೆ ಮೀಸಲಾತಿ ನಿಗದಿ ಮಾಡಬೇಕೆಂದು ಹಠ ಹಿಡಿದಿದ್ದಾರೆ.
ಬಿಟಿಎಂ ಲೇಔಟ್‍ನ ಬಿಬಿಎಂಪಿ ಸದಸ್ಯೆಯೊಬ್ಬರನ್ನು ಮೇಯರ್ ಮಾಡುವ ಸಂಬಂಧ ಇತ್ತೀಚೆಗೆ ರಾಮಲಿಂಗಾರೆಡ್ಡಿ ಅವರು ತಮ್ಮ ಬೆಂಬಲಿಗರ ಸಭೆ ಕರೆದಿದ್ದು, ಅದರಲ್ಲಿ ಬೆಂಗಳೂರಿನ 23 ಮಂದಿ ಕಾಪೆರ್Çೀರೇಟರ್‍ಗಳು, 6 ಮಂದಿ ಶಾಸಕರು ಭಾಗವಹಿಸಿದ್ದರು ಎನ್ನಲಾಗಿದೆ.
ಈ ಮೊದಲು ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಗೆಲ್ಲಲ್ಲೇಬೇಕೆಂಬ ಹಠಕ್ಕೆ ಬಿದ್ದಿದ್ದ ಕಾಂಗ್ರೆಸ್ ನಾನಾ ರೀತಿಯ ತಂತ್ರಗಾರಿಕೆಗಳನ್ನು ಅನುಸರಿಸಿತ್ತು. ಬಿಜೆಪಿ ಎಷ್ಟೆಲ್ಲ ಕಸರತ್ತು ನಡೆಸಿದರೂ ಅವಕಾಶ ನೀಡದೆ ಮಹಾನಗರದ ಅಧಿಕಾರವನ್ನು ಉಳಿಸಿಕೊಂಡಿತ್ತು.
ಈ ಬಾರಿ ಮಿತ್ರ ಪಕ್ಷಗಳ ನಡುವೆ ಹಿಂದಿಗಿಂತಲೂ ಹೆಚ್ಚಿನ ಅನ್ಯೋನ್ಯತೆ ಇದೆ. ಆದರೆ ಕಾಂಗ್ರೆಸ್‍ನ ಶಾಸಕರ ನಡುವೆಯೇ ಮಸುಕಿನ ಗುದ್ದಾಟ ಆರಂಭವಾಗಿದ್ದು, ಗುಂಪುಗಾರಿಕೆ ಹೆಚ್ಚಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವರಾದ ಕೆ.ಜೆ.ಜಾರ್ಜ್, ಮಾಜಿ ಸಚಿವರಾದ ರೋಷನ್‍ಬೇಗ್, ರಾಮಲಿಂಗಾರೆಡ್ಡಿ, ಶಾಸಕರಾದ ಭೆರತಿಬಸವರಾಜು, ಎನ್.ಎ.ಹ್ಯಾರಿಸ್ ಮತ್ತಿತರರು ತಮ್ಮ ಬೆಂಬಲಿಗರನ್ನೇ ಮೇಯರ್ ಮಾಡಲು ಲಾಬಿ ನಡೆಸುತ್ತಿದ್ದಾರೆ.
ಮೀಸಲಾತಿ ನಿಗದಿಯಿಂದ ಆರಂಭಗೊಂಡಿರುವ ಈ ಲಾಬಿ ಮೇಯರ್ ಚುನಾವಣೆ ಮುಗಿಯುವವರೆಗೂ ಪರಮೇಶ್ವರ್ ಅವರಿಗೆ ತಲೆ ನೋವಾಗಿ ಪರಿಣಮಿಸಿದೆ. ಎಲ್ಲಾ ಶಾಸಕರು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಬಿಎಂಪಿ ಅಧಿಕಾರ ಉಳಿಸಿಕೊಂಡು ತಮಗೆ ಬೇಕಾದವರನ್ನೇ ಮೇಯರ್ ಮಾಡಿಕೊಳ್ಳುವುದು ಪರಮೇಶ್ವರ್ ಅವರಿಗೆ ದೊಡ್ಡ ಸವಾಲೇ ಆಗಿದೆ.