ಬೆಂಗಳೂರು, ಆ.17-ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ಶೋಕ ಸಾಗರದಲ್ಲಿ ಮುಳುಗಿರುವ ರಾಜ್ಯದಲ್ಲಿ ಅಲ್ಲಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಭೆಗಳನ್ನು ನಡೆಸಿದರು.
ಅಜಾತಶತ್ರು ವಾಜಪೇಯಿ ಅವರ ನಿಧನ ತುಂಬಲಾರದ ನಷ್ಟವಾಗಿದ್ದು, ಬೆಂಗಳೂರಿನ ಹಲವು ಕಡೆ ಪೆಂಡಾಲ್‍ಗಳನ್ನು ಹಾಕಿ ವಾಜಪೇಯಿ ಅವರ ಭಾವಚಿತ್ರವಿಟ್ಟು ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆಲವು ಕಡೆ ಸ್ಥಳೀಯ ಮುಖಂಡರು ವಾಜಪೇಯಿ ಅವರ ಗುಣಗಾನ ಮಾಡಿದರು.
ಈ ಹಿಂದೆ ಯಾವ ರಾಜಕಾರಣಿಯ ನಿಧನ ವೇಳೆ ಜನಸಾಮಾನ್ಯರು ಈ ಮಟ್ಟಿಗೆ ಸ್ಪಂದಿಸಿರಲಿಲ್ಲ. ಸುದೀರ್ಘ ರಾಜಕಾರಣದಲ್ಲಿ ಆದರ್ಶದ ಬೆಟ್ಟವನ್ನೇ ಮುಂದಿನ ಪೀಳಿಗೆಗೆ ಬಿಟ್ಟು ಹೋಗಿರುವ ವಾಜಪೇಯಿ ಅವರ ವಿಷಯದಲ್ಲಿ ಪಕ್ಷಭೇದ ಮರೆತು ಜನ ಸ್ಪಂದಿಸುತ್ತಿದ್ದಾರೆ.
ಚಿಕ್ಕ ಚಿಕ್ಕ ಪೆಂಡಾಲ್‍ಗಳಲ್ಲಿ, ಸಮುದಾಯ ಭವನಗಳಲ್ಲಿ, ರಸ್ತೆ ಬದಿಗಳಲ್ಲಿ ವಾಜಪೇಯಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಲಾಯಿತು.
ಇನ್ನು ಕೆಲವು ಅಭಿಮಾನಿಗಳು ತಮ್ಮ ವಾಹನಗಳ ಮೇಲೆ ವಾಜಪೇಯಿ ಅವರ ಭಾವಚಿತ್ರ ಅಂಟಿಸಿಕೊಂಡು ಅಭಿಮಾನ ಮೆರೆದಿದ್ದಾರೆ.
ರಾಜ್ಯಸರ್ಕಾರ ಶೋಕಾಚರಣೆ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಿದ್ದರಿಂದ ಬೆಂಗಳೂರಿನಲ್ಲಿ ಸ್ಮಶಾನ ಮೌನ ಆವರಿಸಿತ್ತು. ರಸ್ತೆಗಳಲ್ಲಿ ಸಂಚಾರ ದಟ್ಟಣೆ ವಿರಳವಾಗಿತ್ತು. ಕೆಲವು ಕಡೆ ಅಂಗಡಿಮುಂಗಟ್ಟುಗಳು ಸ್ವಯಪ್ರೇರಿತವಾಗಿ ಮುಚ್ಚಲ್ಪಟ್ಟಿತ್ತು. ಕೆಲವು ಖಾಸಗಿ ಸಂಸ್ಥೆಗಳು ಕೂಡ ರಜೆ ಘೋಷಣೆ ಮಾಡಿ ಅಭಿಮಾನ ಪ್ರದರ್ಶಿಸಿವೆ.
ಭಾರತರತ್ನ ವಾಜಪೇಯಿ ಅವರ ನಿಧನ ಬಿಜೆಪಿಗಷ್ಟೇ ಅಲ್ಲದೆ ಸಾರ್ವತ್ರಿಕ ಶೋಕಾಚರಣೆಗೆ ಕಾರಣವಾಗಿರುವುದು ಇತಿಹಾಸ. ವಾಜಪೇಯಿ ಅವರ ಅಂತಿಮ ಯಾತ್ರೆ ಮತ್ತು ಅಂತ್ಯಸಂಸ್ಕಾರವನ್ನು ವೀಕ್ಷಿಸಲು ಜನ ಟಿವಿಗಳ ಮುಂದೆ ಕುಳಿತಿದ್ದರಿಂದ ಬೆಂಗಳೂರು ಖಾಲಿ ಖಾಲಿಯಾಗಿತ್ತು.
ಮಾಜಿ ಪ್ರಧಾನಿಯವರ ನಿಧನ ಜನಸಾಮಾನ್ಯರನ್ನು ಕನಲುವಂತೆ ಮಾಡಿದ್ದು, ವಾಜಪೇಯಿ ಅವರ ಹಿರಿಮೆಗೆ ಸಾಕ್ಷಿಯಾಗಿದೆ.