ಮಾಜಿ ಪ್ರಧಾನಿಗೆ ಭಾವಪೂರ್ಣ ಶ್ರದ್ಧಾಂಜಲಿ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ವಿಧಾನಪರಿಷತ್ ಮಾಜೀ ಸಭಾಪತಿ ಡಿ.ಎಚ್.ಶಂಕರಮೂರ್ತಿ, ರಾಮಚಂದ್ರ ಗೌಡ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರ ಉಪಸ್ಥಿತಿಯಲ್ಲಿ ಇಂದು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಅಗಲಿದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಕ್ಷದ ಕಾರ್ಯಾಲಯ ಮುಂಭಾಗದಲ್ಲಿ ಅಗಲಿದ ಮಹಾನ್ ಚೇತನದ ಭಾವಚಿತ್ರಕ್ಕೆ ಪಕ್ಷದ ಮುಖಂಡರು,ಸಾರ್ವಜನಿಕರು ಪುಷ್ಪಾಂಜಲಿ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು ಅಟಲ್ ಜೀ ಅವರ ಅವಿರತ ಸೇವೆಯನ್ನು ಸ್ಮರಿಸಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಅಟಲ್ ಜೀ ಅವರಿಗೆ ಅಟಲ್ ಜೀ ಅವರೇ ಸಾಟಿ.ವಾಜಪೇಯಿ ಅವರು ಇದ್ದ ಬಿಜೆಪಿಯಲ್ಲಿ ಇದ್ದೇವೆ ಎನ್ನುವುದೇ ನಮ್ಮ ಪುಣ್ಯ,ಅವರ ಪ್ರಾಮಾಣಿಕತೆಯಲ್ಲಿನ ಒಂದು ತುಣುಕು ನಾವಾಗೋಣ ಎಂದು ಹೇಳಿದರು.

ಮಾಜೀ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ ವಾಜಪೇಯಿಯವರು ಹೇಳಿದ ನ ದೈನ್ಯಂ…ನ ಪಲಾಯನಂ…ಎನ್ನುವ ಮಾತುಗಳನ್ನು ಸ್ಮರಿಸಿಕೊಂಡರು.ನಾವಿಂದು ಪಕ್ಷದಲ್ಲಿ ವಿವಿಧ ಹಂತದಲ್ಲಿ ಅಧಿಕಾರ ಅನುಭವಿಸಿದೇವೆ.ಅದಕ್ಕೆ ಪ್ರತಿಯೊಬ್ಬರ ಜನಮಾನಸದಲ್ಲಿರುವ ವಾಜಪೇಯಿ ಅವರೇ ಕಾರಣ ಎಂದರು.
ವಿರೋಧಪಕ್ಷಗಳು,ಪಾಕಿಸ್ತಾನ ಎಲ್ಲರೂ ಅವರನ್ನು ಕೊಂಡಾಡಿದ್ದಾರೆ.ಆದ್ದರಿಂದಲೇ ಅಟಲ್ ಜೀ ಆಜಾತಶತ್ರು ಎಂದು ಕರೆಯಲ್ಪಟ್ಟಿದ್ದಾರೆ ಎಂದು ಅಶೋಕ್ ಹೇಳಿದರು.

ನಾಯಕರಾದ ವಿ.ಸೋಮಣ್ಣ, ಜಗ್ಗೇಶ್, ಚಿ.ನಾ.ರಾಮು, ಅಬ್ದುಲ್ ಅಜೀಂ, ಭಾರತಿ ಶೆಟ್ಟಿ, ಶಿವರಾಂ, ಡಿ.ಎಸ್.ವೀರಯ್ಯ, ಪಿ.ಎನ್.ಸದಾಶಿವ, ಪದ್ಮನಾಭ ರೆಡ್ಡಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ