ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗಾಗಿ ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಈಗಾಗಲೇ ಅಗ್ರ ನಾಯಕರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದೌಡಾಯಿಸಿ ಮೇರು ನಾಯಕನ ಯೋಗಕ್ಷೇಮ ವಿಚಾರಿಸಿದ್ದಾರೆ.
ಇಂದು ಬೆಳಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ವಾಜಪೇಯಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಏಮ್ಸ್ನ ಹಿರಿಯ ವೈದ್ಯ ಅರ್ಜಿತ್ ವಿಜ್, ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಜೀವರಕ್ಷಕವನ್ನು ಅಳವಡಿಸಲಾಗಿದೆ ಎಂದಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವಾಜಪೇಯಿ ಅವರ ಆರೋಗ್ಯ ಶೀಘ್ರವೇ ಸುಧಾರಿಸಲೆಂದು #BharatRatnaVajpayee ಹ್ಯಾಷ್ಟ್ಯಾಗ್ನೊಂದಿಗೆ ಪ್ರಾರ್ಥಿಸುತ್ತಿದ್ದಾರೆ. ರಾಜಕೀಯ ಮುಖಂಡರಾದ ಶಶಿ ತರೂರು, ವಿಜಯ್ ಗೋಯೆಲ್, ಓಮರ್ ಅಬ್ದುಲ್ಲಾ ಸೇರಿದಂತೆ ಎಲ್ಲಾ ರಂಗಗಳ ಪ್ರಮುಖರು ಟ್ವಿಟರ್ ಮೂಲಕ ವಾಯಪೇಯಿ ಅವರ ಶೀಘ್ರ ಗುಣಮುಖರಾಗಲೆಂದು ಆಶಿಸುತ್ತಿದ್ದಾರೆ.