
ನವದೆಹಲಿ: ಕಳೆದೊಂದು ತಿಂಗಳಿನಿಂದ ಕೇರಳವನ್ನು ಬಹುವಾಗಿ ಆವರಿಸಿಕೊಂಡಿರುವ ಮುಂಗಾರು ಮಳೆ, ರಾಜ್ಯದಲ್ಲಿ ತನ್ನ ಪ್ರತಾಪವನ್ನು ಮತ್ತಷ್ಟು ಮುಂದುವರೆಸಿದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರೀ ಅನಾಹುತ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಪರಿಸ್ಥಿತಿ ಕುರಿತಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚರ್ಚೆ ನಡೆಸಿದ್ದಾರೆಂದು ಗುರುವಾರ ತಿಳಿದುಬಂದಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕೇರಳ ಸಿಎಂ ಶ್ರೀ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತಂತೆ ಚರ್ಚೆ ನಡೆಸಿದ್ದೇವೆ. ರಕ್ಷಣಾ ಕಾರ್ಯ ಹಾಗೂ ಪರಿಹಾರ ಕಾರ್ಯಾಚರಣೆ ಕುರಿತಂತೆ ರಕ್ಷಣಾ ಸಚಿವಾಲಯದೊಂದಿಗೆ ಮಾತುಕತೆ ನಡೆಸಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಕೇರಳ ರಾಜ್ಯ ಜನರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.
ಕೇರಳ ರಾಜ್ಯವನ್ನು ಬಹುವಾಗಿ ಕಾಡುತ್ತಿರುವ ಮುಂಗಾರು ಮಳೆ ನಿನ್ನೆ ಕೂಡ ಒಂದೇ ದಿನದಲ್ಲಿ 29 ಮಂದಿಯನ್ನು ಬಲಿ ಪಡೆದುಕೊಂಡಿತ್ತು. ಇದರೊಂದಿಗೆ ಕಳೆದ ಕೆಲ ದಿನಗಳಲ್ಲಿ ಮುಂಗಾರು ಮಳೆಗೆ ಬಲಿಯಾದವರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.
ಭಾರೀ ಮಳೆಯ ಮತ್ತು ಪ್ರವಾಹದ ಪರಿಣಾಮ ರಾಜ್ಯಹ ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇದೇ ವೇಲೆ ಕೊಚ್ಚಿ ವಿಮಾನ ನಿಲ್ದಾಣದೊಳಗೆ ನೀರು ನುಗ್ಗಿದ ಪರಿಣಾಮ ಶನಿವಾರದವರೆಗೆ ಅಲ್ಲಿ ವಿಮಾನಗಳ ಸಂಚಾರ ನಿಷೇಧಿಸಲಾಗಿದೆ. ಇದಲ್ಲದೆ ರಾಜ್ಯದ ಹಲವು ರೈಲು ನಿಲ್ದಾಣಗಳಲ್ಲೂ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಸಾಮಾನ್ಯ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ ವಾಯುಪಡೆಗೆ ಸೇರಿದ ರನ್ ವೇಗಳಲ್ಲಿ ಸಣ್ಣ ವಿಮಾನಗಳನ್ನು ಇಳಿಸಲು ಅವಕಾಶ ಕೊಡುವಂತೆ ಕೇರಳ ಮುಖ್ಯಮಂತ್ರಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ 35 ಅಣೆಕಟ್ಟುಗಳು ಪೂರ್ಣವಾಗಿ ಭರ್ತಿಯಾಗಿದ್ದು, ಅವುಗಳಿಂದ ಭಾರಿ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಪ್ರದೇಶ ಮತ್ತು ತಗ್ಗು ಪ್ರದೇಶಗಳ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ರವಾನಿಸಲಾಗಿದೆ