ಬೆಂಗಳೂರು, ಆ.16-ಆಯಾ ದಿನದ ಕಾರ್ಯಾಭಾರ ಮುಗಿದರೆ ಸಾಕು ಎಂಬ ಮನಸ್ಥಿತಿಯ ದಿನಗೂಲಿ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.
ವಿಧಾನಸಭೆಯ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ವಿಶ್ವಾಸದ ಮೇಲೆ ನಡೆಯುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಒತ್ತಡದ ಮೇಲೆ ನಡೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಕಟ್ಟಿಹಾಕಿರುವ ಗೂಟವನ್ನು ಕಿತ್ತುಕೊಂಡು ಯಾವಾಗ ಹೊರಬರುತ್ತದೋ ಗೊತ್ತಿಲ್ಲ.
17 ಜನ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ವರದಿ ಇದೆ. ನಿನ್ನೆ ಸಂಗೊಳ್ಳಿರಾಯಣ್ಣ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಹಾಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಸ್ಪರ ಭೇಟಿ ಮಾಡಲಾಗದಷ್ಟು ಅಸಹನೀಯ ವಾತಾವರಣವಿದೆ. ಈ ಸರ್ಕಾರದ ಬಳಿ ದೂರದೃಷ್ಟಿಯ ಯಾವ ಯೋಜನೆಗಳೂ ಇಲ್ಲ. ತಾತ್ಕಾಲಿಕವಾಗಿ ನಡೆದುಕೊಂಡು ಹೋದರೆ ಸಾಕು ಎಂಬಂತಿದೆ. ಈ ಸರ್ಕಾರ ಪತನವಾದರೆ ಅಳುವವರೂ ಯಾರೂ ಇಲ್ಲ ಎಂದು ಅವರು ಲೇವಡಿ ಮಾಡಿದರು.
ಎರಡೂ ಪಕ್ಷಗಳಲ್ಲೂ ಇದೇ ಮನಸ್ಥಿತಿ ಇದೆ. ಅದರಲ್ಲೂ ಕಾಂಗ್ರೆಸ್ ಶಾಸಕರಲ್ಲಿ ಸಮ್ಮಿಶ್ರ ಸರ್ಕಾರ ಶೀಘ್ರ ಪತನವಾದಷ್ಟು ಒಳ್ಳೆಯದು. ಇಲ್ಲವಾದರೆ ನಮ್ಮ ರಾಜಕೀಯ ಜೀವನವೇ ಮುಗಿದುಹೋಗಬಹುದು ಎಂಬ ಆತಂಕ ಕಾಡುತ್ತಿದೆ. ಮುಖ್ಯಮಂತ್ರಿಯವರಿಗೆ ಯಾರ ಮೇಲೂ ನಂಬಿಕೆ ಇಲ್ಲ. ಸ್ವಂತ ಪಕ್ಷ ಜೆಡಿಎಸ್, ಮಿತ್ರ ಪಕ್ಷ ಕಾಂಗ್ರೆಸ್, ವಿರೋಧ ಪಕ್ಷ ಬಿಜೆಪಿಯ ಮುಖಂಡರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಿಸುತ್ತಿದ್ದಾರೆ ಎಂದು ದೂರಿದರು.
ಹೀಗಾಗಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಒಂದು ಸರ್ಕಾರ ಪತನವಾದರೆ ಆಯಾ ಸಂದರ್ಭಕ್ಕನುಗುಣವಾಗಿ ಬಿಜೆಪಿ ನಿರ್ಧಾರ ಕೈಗೊಳ್ಳುತ್ತದೆ. ಸರ್ಕಾರ ಪತನವಾಗುವಲ್ಲಿ ಬಿಜೆಪಿ ಯಾವುದೇ ಪಾತ್ರ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಮುಂದೂಡಲು ಆಗ್ರಹ
ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದೆ. ನಾಳೆ ನಾಮಪತ್ರ ಸಲ್ಲಿಸಲು ಕೊನೆ ದಿನಾಂಕವಾಗಿದ್ದು, 29 ರಂದು ಮತದಾನ ನಡೆಯಬೇಕು. ಕರಾವಳಿ, ಮಲೆನಾಡು ಭಾಗಗಳಲ್ಲಿ 34 ವರ್ಷಗಳ ನಂತರ ದಾಖಲೆಯ ಮಳೆಯಾಗಿದೆ. ಅಕ್ಷರಶಃ ಎಲ್ಲರೂ ಜಲಪ್ರಳಯಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರದ ಬಳಿ ಪುನರ್ವಸತಿ ಮತ್ತು ಪರಿಹಾರ ಯೋಜನೆಗಳಿಲ್ಲ ಎಂದು ಆರೋಪಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಬೇಕೆಂದು ಚುನಾವಣಾ ಆಯೋಗಕ್ಕೆ ಸಿ.ಟಿ.ರವಿ ಒತ್ತಾಯಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಅಧಿಕಾರಿಗಳು ಚುನಾವಣೆ ನಡೆಸುವುದೋ ಅಥವಾ ಮಳೆ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವುದೋ ಎಂಬ ಗೊಂದಲದಲ್ಲಿದ್ದಾರೆ. ನೆರೆ, ಪ್ರವಾಹದಂತಹ ಸಂಕಷ್ಟದಲ್ಲಿ ಸಿಲುಕಿರುವ ಜನರಿದ್ದು, ಚುನಾವಣೆಯಲ್ಲಿ ಮತ ಕೇಳುವ ಪರಿಸ್ಥಿತಿಯಲ್ಲಿ ಅಭ್ಯರ್ಥಿಗಳಿಲ್ಲ. ಹೀಗಾಗಿ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಚುನಾವಣೆ ಮುಂದೂಡುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಠಿಕಾಣಿ ಹೂಡಿ ಪರಿಹಾರ ಯೋಜನೆಗಳನ್ನು ಕೈಗೊಳ್ಳಬೇಕು. ಮುಖ್ಯಮಂತ್ರಿಯವರು ಈ ಸಂದರ್ಭದಲ್ಲಿ ತೀರ್ಥಯಾತ್ರೆ ಮಾಡುತ್ತಿರುವುದು ಸರಿಯಲ್ಲ ಎಂದು ಸಿ.ಟಿ.ರವಿ ಹೇಳಿದರು.
ಬಿಜೆಪಿ ಮೂರು ತಂಡಗಳಲ್ಲಿ ರಾಜ್ಯಾದ್ಯಂತ ಪ್ರವಾಸ ನಡೆಸಲು ನಿರ್ಧರಿಸಿತ್ತು. ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾದ ನಂತರ ತಾತ್ಕಾಲಿಕವಾಗಿ ಪ್ರವಾಸ ಸ್ಥಗಿತಗೊಳಿಸಲಾಗಿದೆ. ಚುನಾವಣೆ ಮುಗಿದ ಮೇಲೆ ಪ್ರವಾಸ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿವಾಜಪೇಯಿ ಅವರು ಶೀಘ್ರ ಗುಣಮುಖರಾಗಲಿ, 100 ವರ್ಷ ಪೂರೈಸಲಿ ಎಂದು ಹಾರೈಸಿದರು.






