ಮಂಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ, ನೆರೆ ಪ್ರವಾಹ ಪ್ರಕರಣಗಳು ಹೆಚ್ಚುತ್ತಿವೆ. ಶಿರಾಡಿ ಘಾಟ್ ನಲ್ಲಿ 30 ಅಡಿ ಆಳದ ಕಂದಕಕ್ಕೆ ಟ್ಯಾಂಕರ್ ಬಿದ್ದು ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.
ನಿರಂತರ ಮಳೆ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು-ಮಂಗಳೂರು ಮಾರ್ಗವಾಗಿ ಸಂಚರಿಸುವ ಎಲ್ಲಾ ಐಷಾರಾಮಿ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಭಾರೀ ವಾಹನಗಳ ಸಂಚಾರದ ಚಲನೆಗೆ ಆಗಸ್ಟ್ 25ರವರೆಗೆ ಹಾಸನ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಶಿರಾಡಿ ಘಾಟ್ ಗೆ ಬದಲು ಚಾರ್ಮಾಡಿ ಘಾಟಿಯ ರಸ್ತೆ ಸಂಚಾರವನ್ನು ಬಳಸುವಂತೆ ವಾಹನ ಸಂಚಾರರಿಗೆ ಜಿಲ್ಲಾಡಳಿತ ಸೂಚಿಸಿದೆ.
ತುಂಗಾ ಮತ್ತು ಭದ್ರಾ ಅಣೆಕಟ್ಟುಗಳಿಂದ ನೀರು ಹೊರಬಿಟ್ಟ ಕಾರಣ ದಾವಣಗೆರೆ, ಹೊನ್ನಾಳಿ ಮತ್ತು ಹರಿಹರ ತಾಲ್ಲೂಕುಗಳಲ್ಲಿ ಪ್ರವಾಹ ಉಂಟಾಗಿದೆ. ಪುನರ್ವಸತಿ ಕಾರ್ಯಕ್ಕೆ 100 ಕೋಟಿ ರೂ ಪ್ಯಾಕೇಜ್ ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೇಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.