ಮಡಿಕೇರಿ:ಆ-16: ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಅರ್ಧ ಭಾಗ ಜಲಾವೃತವಾಗಿದೆ. ಹಲವೆಡೆ ಭೂಕುಸಿತ ಸಂಭವಿಸಿದ ಪರಿಣಾಮ ಜನರು ಆತಂಕದಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಹೆಮ್ಮೆತ್ತಾಳು ಗ್ರಾಮದಲ್ಲಿ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಮನೆ ಸಮೇತ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಹೆಮ್ಮೆತ್ತಾಳು , ಮೇಘತ್ತಾಳು ಗ್ರಾಮದಲ್ಲಿ ಭಾರೀ ಭೂಕುಸಿತ ಸಂಭವಿಸುತ್ತಿದ್ದು,ಗುಡ್ಡ ಕುಸಿತವಾಗಿ ಅಪಾಯಕ್ಕೆ ಸಿಲುಕಿದ್ದ 20 ಜನರನ್ನು ರಕ್ಷಿಸಲಾಗಿದೆ.
ಮಡಿಕೇರಿಯ ಬದಿಗೆರೆಯಲ್ಲಿ ಗ್ರಾಮ ಜಲಾವೃತವಾಗಿರುವ ಹಿನ್ನಲೆಯಲ್ಲಿ 200 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿ ನಡುಡ್ಡೆಯಂತಾಗಿದ್ದು, ಜನರು ಗುಡ್ಡ ಏರಿ ಕುಳಿತಿದ್ದಾರೆ. ಗುಡ್ಡವೂ ಕುಸಿಯುತ್ತಿದ್ದು ಜನರು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಜಿಲ್ಲಾಡಳಿತ ಹೆಲಿಕ್ಯಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲು ಮುಂದಾಗಿದೆ.
ಹೋಗುವ ಎಲ್ಲಾ ರಸ್ತೆಗಳನ್ನು ತಡೆಹಿಡಿಯಲಾಗಿದೆ. ಇದರಿಂದ ಸ್ಥಳೀಯರು ಮತ್ತು ಬೇರೆ ಕಡೆಗಳಿಂದ ಬಂದ ಪ್ರವಾಸಿಗರು ಕುಶಾಲನಗರದಲ್ಲಿ ಮತ್ತು ಮಂಗಳೂರು-ಮಡಿಕೇರಿ ಹೆದ್ದಾರಿಯಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.
ಕೊಡಗಿನ ಕಾಲೂರು ಗ್ರಾಮದಲ್ಲಿ ಭಾರೀ ಭೂಕುಸಿತಕ್ಕೆ ಕನಿಷ್ಠ 7 ಕುಟುಂಬಸ್ಥರು ಜೀವ ಕಳೆದುಕೊಂಡಿದ್ದಾರೆ. ಕುಶಾಲನಗರದಲ್ಲಿ ಪರಿಹಾರ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದೆ.