
ಬೆಂಗಳೂರು: ಟೀಂ ಇಂಡಿಯಾಗೆ ಆಯ್ಕೆಯಾಗದಿದ್ದರೆ ನನ್ನ ಪ್ರದರ್ಶನದಲ್ಲಿ ಏರುಪೇರಾಗುತ್ತದೆ ಎಂದು ಭಾರತ ಎ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತ ಎ ತಂಡದಲ್ಲಿ ಆಡುವಾಗ ನಾವು ಉತ್ತಮ ಪ್ರದರ್ಶನ ನೀಡಿದರೆ ನಮ್ಮನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡುತ್ತಾರೆ ಎಂಬ ಆಲೋಚನೆ ತಲೆಯಲ್ಲಿ ಸುಳಿದಾಡುತ್ತಿರುತ್ತದೆ. ಇದರಿಂದಾಗಿ ನಾವು ಉತ್ತಮವಾಗಿ ಆಡಲು ಯತ್ನಿಸುತ್ತೇವೆ.
ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಆಡಬೇಕಾದಾಗ ಅಲ್ಲಿ ಅತ್ಯುತ್ತಮ ವೇಗಿಗಳ ದಾಳಿಯನ್ನು ಎದುರಿಸಬೇಕಾಗುತ್ತದೆ. ಆಗ ನಮ್ಮ ಕಾರ್ಯಕ್ಷಮತೆ ಏರುಪೇರಾಗುತ್ತದೆ. ಇದರಿಂದಾಗಿ ನಾವು ಹೆಚ್ಚು ಗಮನವಿಟ್ಟು ಆಡಬೇಕಾಗುತ್ತದೆ ಎಂದು ಶ್ರೇಯಸ್ ಹೇಳಿದ್ದಾರೆ.
ದೇಶೀಯ ಕ್ರಿಕೆಟ್ ನಲ್ಲಿ ಅದ್ಭುತವಾಗಿ ಆಡಿದ್ದರಿಂದ ಶ್ರೇಯಸ್ ಅವರನ್ನು ಸೀಮಿತ ಓವರ್ ಗಳಿಗೆ ಟೀಂ ಇಂಡಿಯಾಗೆ ಆಯ್ಕೆ ಮಾಡಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟ್ ಬೀಸಿದ್ದರು.
ಕಳೆದ ವರ್ಷದ ನ್ಯೂಜಿಲೆಂಡ್ ಎ ತಂಡದ ವಿರುದ್ಧ ಆಡಿದ್ದ ಶ್ರೇಯಸ್ ಅಯ್ಯರ್ 317 ರನ್ ಬಾರಿಸಿದ್ದರು. ಹೀಗಾಗಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.