ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ- ಆರ್‍ಎಸ್‍ಎಸ್ ಸಾಥ್

 

ಬೆಂಗಳೂರು,ಆ.15- ಮುಂಬರುವ 2019ರ ಲೋಕಸಭಾ ಚುನಾವಣೆಗೆ ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ಇದರ ಮುಂದುವರೆದ ಭಾಗವಾಗಿ ಬಿಜೆಪಿಗೆ ಯದುವೀರ್‍ರನ್ನು ಕರೆತರಲು ಆರ್‍ಎಸ್‍ಎಸ್ ಕೂಡ ಸಾಥ್ ನೀಡಲು ಮುಂದಾಗಿದೆ. ಮೂರು ದಿನಗಳ ಕಾಲ ರಾಜ್ಯ ಪ್ರವಾಸದಲ್ಲಿರುವ ಆರ್‍ಎಸ್‍ಎಸ್‍ನ ಸಂಚಾಲಕ ಮೋಹನ್ ಭಾಗವತ್ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಆರ್‍ಎಸ್‍ಎಸ್ ಮುಖಂಡರು, ಯದುವೀರ್‍ರನ್ನು ಬಿಜೆಪಿ ಕರೆತರಲು ತಂತ್ರ ರೂಪಿಸಿದ್ದಾರೆ.

ಇತ್ತ ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್?ರನ್ನು ಬಿಜೆಪಿಗೆ ಕರೆತಂದು, 2019ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಪ್ಲಾನ್ ನಡೆಯುತ್ತಿರುವ ಬೆನ್ನಲ್ಲೇ, ಆರ್‍ಎಸ್‍ಎಸ್‍ನ ನಾಯಕರು ಕೂಡ ಯದುವೀರ್ ಆಹ್ವಾನಕ್ಕೆ ವೇದಿಕೆ ಸಿದ್ಧಪಡಿಸಿದ್ದಾರೆ.
ಆರ್‍ಎಸ್‍ಎಸ್‍ನ ಸಭೆಯಲ್ಲಿ ಅಧಿಕೃತವಾಗಿ ಯದುವೀರ್‍ಗೆ ಬಿಜೆಪಿ ಕರೆತರಲು ನಿರ್ಣಯ ತೆಗೆದುಕೊಳ್ಳಲಾಗಿದ್ದು, ಅತಿ ಶೀಘ್ರದಲ್ಲಿಯೇ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಸಂಪರ್ಕಿಸಲು ತಂತ್ರ ರೂಪಿಸಲಾಗಿದೆ.

ರಾಜಕ್ಕೀಯಕ್ಕೆ ಬರ್ತಾರಾ ಯದುವೀರ್?
ಇತ್ತ ಬಿಜೆಪಿಯಿಂದ ಆಹ್ವಾನ ಬರುತ್ತದೆ ಎಂಬುದನ್ನು ತಿಳಿದಿರುವ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜಕೀಯ ಪ್ರವೇಶಿಸಲು ಆಸಕ್ತಿ ತೋರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಮೈಸೂರಿನ ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‍ರ ರಾಜಕೀಯ ಪ್ರವೇಶಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ನಿರಾಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ.
ಹೀಗಾಗಿ ನಿನ್ನೆ ನಡೆದ ಆರ್‍ಎಸ್‍ಎಸ್ ಸಭೆಯಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್, ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ರಾಣಿ ತ್ರಿಷಿಕಾದೇವಿ ಒಡೆಯರ್ ಅವರ ಮನವೊಲಿಸೋಣ ಎಂಬ ನಿರ್ಣಯಕ್ಕೆ ಬರಲಾಗಿದೆ.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‍ರನ್ನು ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಲು ಆರ್‍ಎಸ್‍ಎಸ್ ಸಂಚಾಲಕ ಮೋಹನ್ ಭಾಗವತ್, ಆರ್‍ಎಸ್‍ಎಸ್‍ನ ರಾಷ್ಟ್ರೀಯ ಮುಖಂಡರಾದ ರಾಮ್ ಮಾಧವ್ ಮತ್ತು ಇಂದ್ರೇಶ್ ಕುಮಾರ್ ಸದ್ಯದಲ್ಲೇ ಮೈಸೂರಿಗೆ ತೆರಳಲಿದ್ದು, ಅವರಿಗೆ ರಾಜ್ಯದ ಕೆಲ ನಾಯಕರುಗಳು ಕೂಡ ಸಾಥ್ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿಗೆ ಬಂದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಇನ್ನು ಹಾಲಿ ಸಂಸದ ಪ್ರತಾಪ್ ಸಿಂಹರನ್ನು ಬೇರೆ ಕ್ಷೇತ್ರಕ್ಕೆ ವಲಸೆ ಹೋಗಲು ಸೂಚಿಸಲಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿಗೆ ಬಂದರೆ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಆನೆ ಬಲ ಬರುವುದಂತೂ ಖಚಿತ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ