ಭಾರೀ ಮಳೆಯಿಂದ ಹಲವೆಡೆ ವಾಹನ ಸಂಚಾರ ಬಂದ್

 

ಬೆಂಗಳೂರು, ಆ.15- ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ರಾಜ್ಯದ ಹಲವೆಡೆ ವಾಹನ ಸಂಚಾರ ಬಂದ್ ಆಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರವನ್ನು ಬಂದ್ ಮಾಡಲಾಗಿದೆ. ಹಾಸನ-ಕೊಡಗು ರಾಜ್ಯ ಹೆದ್ದಾರಿಯಲ್ಲೂ ಅವಘಡಗಳು ಸಂಭವಿಸದಂತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮಡಿಕೇರಿ-ವಿರಾಜಪೇಟೆ ಹೆದ್ದಾರಿಯ ಕೂಡಿಗೆ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನಗಳು ಓಡಾಡದಂತೆ ಸೂಚನೆ ನೀಡಲಾಗಿದೆ.
ಶಿವಮೊಗ್ಗದಲ್ಲಿ ಮುಂದುವರಿದ ವರುಣನ ಆರ್ಭಟದಿಂದ ಭದ್ರಾವತಿ ನಗರದ ಹೊಸ ಸೇತುವೆ ಸಂಪೂರ್ಣ ಮುಳುಗಡೆ ಆಗಿದ್ದು, ಜನರು ಪರದಾಡುತ್ತಿದ್ದಾರೆ. ಭದ್ರಾ ಡ್ಯಾಂನಿಂದ ನೀರು ಹೊರ ಬಿಡಲಾಗುತ್ತಿದ್ದು, ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ.

ಹೊಸ ಸೇತುವೆ ಮುಳುಗಡೆ ಆಗಿರುವುದರಿಂದ 4 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಸಂಪೂರ್ಣ ಮುಳುಗಿದೆ. ಇದರಿಂದ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಶಿವಮೊಗ್ಗದ ಶಿವಶಕ್ತಿ ಪೆಟ್ರೋಲ್ ಬಂಕ್‍ಗೂ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದು, ನಾಗರಿಕರಲ್ಲಿ ಆತಂಕ, ಭಯ ಮನೆ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೇಗುಂದ ಗ್ರಾಮದ ಮುಖ್ಯರಸ್ತೆ ಕುಸಿದಿದ್ದು, ಓಡಾಟಕ್ಕೆ ತೊಂದರೆ ಆಗಿದೆ. ಹಲವು ಪ್ರದೇಶಗಳು ನೀರಿನಿಂದ ಮುಳುಗಿದ್ದು, ರೈತರು ಬೆಳೆದ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.
ಒಟ್ಟಾರೆ ವರುಣನ ಆರ್ಭಟ ಜೋರಾಗಿದ್ದು, ರಾಜ್ಯದ ಅಣೆಕಟ್ಟೆಗಳು, ಹಳ್ಳ-ಕೊಳ್ಳಗಳು, ಕೆರೆಗಳು ಭರ್ತಿಯಾಗಿ ಜನರಲ್ಲಿ ಸಂತೋಷ ಉಂಟಾಗಿದ್ದರೂ ರಾಜ್ಯದ ಹಲವು ಭಾಗಗಳಲ್ಲಿ ವರುಣ ದೇವರ ನರ್ತನಕ್ಕೆ ಜನರು ನಲುಗಿ ಹೋಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ