ಬೆಂಗಳೂರು, ಆ.15-ಸಮ್ಮಿಶ್ರ ಸರ್ಕಾರದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆ ಲೋಕಸಭೆ ಚುನಾವಣೆವರೆಗೂ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.
ಸಚಿವ ಸ್ಥಾನದ ಆಕಾಂಕ್ಷಿಗಳ ತೀವ್ರ ಒತ್ತಡದ ನಡುವೆಯೂ ಹೈಕಮಾಂಡ್ ಮತ್ತು ರಾಜ್ಯ ಪ್ರಮುಖ ನಾಯಕರು ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆಗೆ ಕೈ ಹಾಕದಿರಲು ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ ಸಮೃದ್ಧ ಮಳೆಯಾಗಿದ್ದು, ಸದ್ಯಕ್ಕೆ ಯಾವುದೇ ಬಿಕ್ಕಟ್ಟುಗಳಿಲ್ಲ. ಜೆಡಿಎಸ್-ಕಾಂಗ್ರೆಸ್ ನಡುವೆ ಸಣ್ಣಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿ ಸರ್ಕಾರ ಸುಗಮ ಆಡಳಿತ ನಡೆಸುತ್ತಿದೆ. ಈ ಮಧ್ಯೆ ಬಿಜೆಪಿ ಕಾಂಗ್ರೆಸ್‍ನ ಸುಮಾರು 10-12 ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಲೇ ಇದೆ.
ಕಾಂಗ್ರೆಸ್‍ನಲ್ಲಿ 6 ಸಚಿವ ಸ್ಥಾನಗಳು ಮಾತ್ರ ಬಾಕಿ ಉಳಿದಿದ್ದು, 60ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಐದಾರು ಬಾರಿ ಗೆದ್ದಿದ್ದು, ಇನ್ನು ಎರಡು ಮೂರು ಬಾರಿ, ಮೊದಲ ಬಾರಿ ಗೆದ್ದವರು ರಾಜಕೀಯವಾಗಿ ಬಹಳ ಪ್ರಭಾವಶಾಲಿಗಳಿದ್ದಾರೆ. ಕಾಂಗ್ರೆಸ್‍ನ ಪ್ರಮುಖ ನಾಯಕರ ಮಕ್ಕಳು, ಹೈಕಮಾಂಡ್‍ನ ನೇರ ಸಂಪರ್ಕದಲ್ಲಿರುವ ಶಾಸಕರು, ಸತತವಾಗಿ ಸಚಿವ ಸಂಪುಟ ಸೇರಲು ಲಾಬಿ ನಡೆಸುತ್ತಲೇ ಇದ್ದಾರೆ.
ಸಮ್ಮಿಶ್ರ ಸರ್ಕಾರದ ಇಕ್ಕಟ್ಟಿನ ವಾತಾವರಣದಲ್ಲಿ ಕಾಂಗ್ರೆಸ್‍ಗೆ ಸಿಕ್ಕಿರುವುದು ಕೇವಲ 22 ಸ್ಥಾನಗಳು. ಅದರಲ್ಲಿ ಯಾರಿಗೇ ಸಚಿವ ಸ್ಥಾನ ನೀಡಿದರೂ, ಉಳಿದವರು ಅಸಮಾಧಾನಗೊಂಡು ಬಂಡಾಯದ ಬಾವುಟ ಹಿಡಿಯುವುದು ನಿಶ್ಚಿತ. ಸಚಿವ ಸಂಪುಟ ವಿಸ್ತರಣೆಯಾದ ನಂತರವೇ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಪದೇ ಪದೇ ಭವಿಷ್ಯ ನುಡಿಯುತ್ತಿದ್ದಾರೆ. ಇಂದು ಬಹುತೇಕ ವಾಸ್ತವಾಂಶಕ್ಕೆ ಹತ್ತಿರವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ರಿಸ್ಕ್ ತೆಗೆದುಕೊಳ್ಳದೆ ಇರಲು ನಿರ್ಧರಿಸಿದ್ದು, ಲೋಕಸಭೆ ಚುನಾವಣೆವರೆಗೂ ಸಂಪುಟ ವಿಸ್ತರಣೆಯನ್ನು ಮುಂದೂಡುವ ಚಿಂತನೆ ನಡೆಸಿದೆ.
ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಬೀದರ್‍ಗೆ ಆಗಮಿಸಿದಾಗಲೂ ಕಾಂಗ್ರೆಸ್‍ನ ಪ್ರಮುಖ ನಾಯಕರ ಜೊತೆ ಚರ್ಚೆ ಮಾಡಿದ್ದು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆ ಬೇಡ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳು ಸಂಪುಟ ಸೇರುವ ಆಕಾಂಕ್ಷಿಗಳಾದ ಎಂ.ಬಿ.ಪಾಟೀಲ್, ರಹೀಮ್‍ಖಾನ್, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವಾರು ಮಂದಿ ದೆಹಲಿಗೆ ತೆರಳಿ ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಲು ಶತಪ್ರಯತ್ನ ನಡೆಸಿದರೂ ಅದಕ್ಕೆ ಅವಕಾಶ ಸಿಕ್ಕಿಲ್ಲ.
ಸದ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಅದು ಮುಗಿಯುವವರೆಗೂ ಸಂಪುಟ ವಿಸ್ತರಣೆ ಇಲ್ಲ ಎಂದು ಕಾರಣ ಹೇಳಿ ದಿನಗಳನ್ನು ಮುಂದೂಡಲಾಗುತ್ತಿದೆ. ನಂತರ ಕೆಲವು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ಆ ಚುನಾವಣೆಗಳು ಮುಗಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿ ಕಾಲ ಹರಣ ಮಾಡಲಾಗುತ್ತದೆ. ಆ ಹೊತ್ತಿಗಾಗಲೇ ಲೋಕಸಭೆ ಚುನಾವಣೆ ಎದುರಾಗಲಿದ್ದು, ಅಂತಿಮ ಗಡುವು ನೀಡಿ ಲೋಕಸಭೆ ಚುನಾವಣೆ ಮುಗಿದ ಮೇಲೆ ಸಂಪುಟ ವಿಸ್ತರಣೆ ಎಂದು ಮೂಗಿಗೆ ತುಪ್ಪ ಸವರುವ ಚಿಂತನೆ ನಡೆದಿದೆ.
ಒಂದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮರುಸ್ಥಾಪನೆಯಾದರೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದ್ದು, ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳು ಜಾರಿಗೊಳ್ಳಲಿವೆ. ಇಲ್ಲದೆ ಹೋದರೆ ರಾಜಕೀಯ ಅಸ್ಥಿರತೆ ಎದುರಾಗುವ ಆತಂಕ ಇದ್ದು, ಪರಿಸ್ಥಿತಿ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.