ಗೋವಾ ಮೇಲ್ಮನವಿ ಸಲ್ಲಿಸಿದರೆ ಕಾನೂನು ಹೋರಾಟ ಅನಿರ್ವಾಯ- ಎಚ್.ಡಿ.ದೇವೇಗೌಡ,-ಬೆಂಗಳೂರಿನಲ್ಲೇ ಏರೋ ಇಂಡಿಯಾ

ನವದೆಹಲಿ,ಆ.15- ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಮಂಡಳಿ ನೀಡಿರುವ ತೀರ್ಪನ್ನು ಪ್ರಶ್ನಿಸಿ ಗೋವಾ ಮೇಲ್ಮನವಿ ಸಲ್ಲಿಸಿದರೆ ನಾವು ಕೂಡ ಕಾನೂನು ಹೋರಾಟ ನಡೆಸುವುದು ಅನಿರ್ವಾಯ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ನ್ಯಾಯಮಂಡಳಿ ನೀಡಿರುವ ತೀರ್ಪು ಪೂರ್ಣ ಮಟ್ಟದಲ್ಲಿ ತೃಪ್ತಿ ತಂದಿಲ್ಲವಾದರೂ ನಮಗೆ ನ್ಯಾಯಬದ್ಧವಾಗಿ ಸಿಗಬೇಕಾದ ನೀರು ಬಳಸಲು ಅವಕಾಶ ನೀಡಿರುವುದು ತುಸು ನೆಮ್ಮದಿ ತಂದಿದೆ. ಗೋವಾ ರಾಜ್ಯ ನಮಗೇನು ಭಿಕ್ಷೆ ನೀಡಿಲ್ಲ. ನಮ್ಮ ಪಾಲಿನ ಹಕ್ಕು ನಮಗೆ ಸಿಕ್ಕಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ನ್ಯಾಯಮಂಡಳಿ ತೀರ್ಪು ಪ್ರಶ್ನಿಸಿ ಗೋವಾ ಮಹದಾಯಿ ನ್ಯಾಯಮಂಡಳಿಗೆ ಇಲ್ಲವೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದರೆ ನಾವೇನು ಕೈಕಟ್ಟಿ ಕೂರುವುದಿಲ್ಲ. ನಮಗೂ ಕೂಡ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸುವುದು ಗೊತ್ತಿದೆ ಎಂದರು.
ಮಹದಾಯಿ ನದಿಯಿಂದ ನೀರು ಪಡೆಯುವುದು ಕರ್ನಾಟಕದ ಹಕ್ಕು. ನಮ್ಮ ವಕೀಲರು ನ್ಯಾಯಮಂಡಳಿಯಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರಿಂದ ಕುಡಿಯುವ ನೀರಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಗೋವಾ ತಕರಾರು ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ನನಗೆ ನ್ಯಾಯಮಂಡಳಿ ನೀಡಿರುವ ತೀರ್ಪಿನ ಪ್ರತಿ ಈವರೆಗೂ ಲಭ್ಯವಾಗಿಲ್ಲ. ಬೆಂಗಳೂರಿಗೆ ಬಂದ ನಂತರ ಅದನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಪ್ರತಿಕ್ರಿಯೆ ನೀಡುತ್ತೇನೆ. ಅಲ್ಲಿಯವರೆಗೂ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಈ ಹಿಂದೆ ಕಾವೇರಿ ನದಿನೀರು ಹಂಚಿಕೆ ಸಂಬಂಧ ನ್ಯಾಯಮಂಡಳಿ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್‍ನ ವಕೀಲರಾದ ಪಾಲಿನಾರಿಮನ್,ಮೋಹನ್‍ಕಾತರಕಿ ಸೇರಿದಂತೆ ಮತ್ತಿತರ ವಕೀಲರ ಜೊತೆ ಚರ್ಚಿಸಿದ ನಂತರವೇ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬೇಕೆಂದು ಸರ್ಕಾರಕ್ಕೆ ಸಲಹೆ ಮಾಡಿದ್ದೆ
ಸುಪ್ರೀಂಕೋರ್ಟ್‍ನಲ್ಲಿ ನಾವು ನ್ಯಾಯಾಧೀಶರ ನಡುವೆ ಸಮರ್ಥವಾದ ದಾಖಲೆಗಳನ್ನು ಒದಗಿಸಿದ್ದರಿಂದ ಅಂತಿಮ ತೀರ್ಪಿನಲ್ಲಿ ನಮಗೆ ನ್ಯಾಯ ಸಿಕಿತು. ಈಗಲೂ ಕೂಡ ಮಹದಾಯಿಯಲ್ಲೂ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಮಹದಾಯಿಗಾಗಿ ಎಷ್ಟು ದಿನ ರೈತರು ಹೋರಾಟ ನಡೆಸಿ ನ್ಯಾಯಮಂಡಳಿ ತೀರ್ಪಿನಿಂದ ಖುಷಿಯಾಗಿದ್ದಾರೆ.ಉತ್ತರ ಕರ್ನಾಟಕದ ಕೆಲವು ಭಾಗಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವುದು ಎಲ್ಲ ಸರ್ಕಾರಗಳ ಕರ್ತವ್ಯ. ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ದೇವೇಗೌಡರು ಸಲಹೆ ನೀಡಿದರು.

ಬೆಂಗಳೂರಿನಲ್ಲೇ ಏರೋ ಇಂಡಿಯಾ – ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೇಂದ್ರ ಸರ್ಕಾರವನ್ನು ಆಗ್ರಹಿಸಿ

ನವದೆಹಲಿ, ಆ.15- ಬೆಂಗಳೂರಿನಲ್ಲೇ ಏರೋ ಇಂಡಿಯಾ-2018 ಶೋ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕೇಂದ್ರ ಸರ್ಕಾರವನ್ನು ಆಗ್ರಹಿಸಿನಡೆಸಬೇಕೆಂದು ದ್ದಾರೆ.
ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಸಂಬಂಧ ತಾವು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಬೆಂಗಳೂರಿನಲ್ಲೇ ಏರ್ ಶೋ ನಡೆಸುವಂತೆ ಒತ್ತಾಯಿಸುತ್ತೇನೆ ಎಂದರು.
ಈ ಬಾರಿ ಏರ್ ಶೋ ಉತ್ತರಪ್ರದೇಶದ ರಾಜಧಾನಿ ಲಕ್ನೋಗೆ ಸ್ಥಳಾಂತರಗೊಳ್ಳಲಿದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಏರೋ ಇಂಡಿಯಾ ಶೋ ವಿಶ್ವವಿಖ್ಯಾತಿ ಗಳಿಸಿದೆ. ಈ ಬಾರಿಯೂ ಅದು ಇಲ್ಲೇ ನಡೆದರೆ ಚೆನ್ನಾಗಿರುತ್ತದೆ ಎಂದು ಹೇಳಿದರು.
ಸಕಾರಣ ನೀಡದೇ ಸ್ಥಳ ಬದಲಾವಣೆ ಮಾಡುವುದು ಸರಿಯಲ್ಲ. ಅನಂತಕುಮಾರ್ ಅವರಂಥ ಹಿರಿಯ ಸಚಿವರು ಕೇಂದ್ರ ಮಂತ್ರಿಮಂಡಲದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರೂ ಈ ಬೆಳವಣಿಗೆ ಸರಿಯಲ್ಲ. ಯಾವುದೇ ಕಾರಣಕ್ಕೂ ಬೆಂಗಳೂರನ್ನು ಹೊರತಪಡಿಸಿ ಅನ್ಯ ರಾಜ್ಯದಲ್ಲಿ ಏರೋ ಇಂಡಿಯಾ-2018 ಶೋ ನಡೆಸುವುದು ಬೇಡ. ಈ ಬಗ್ಗೆ ತಾವು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಗೌಡರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ