ಬೆಂಗಳೂರು, ಆ.15-ಅಖಂಡ ಕರ್ನಾಟಕದ ಅಸ್ಮಿತೆಗೆ ಕಿಂಚಿತ್ತೂ ಭಂಗ ಬಾರದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಸರ್ವರಿಗೂ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ಅಭಿವೃದ್ಧಿಯೇ ಮಾನದಂಡಗಳಾಗಿವೆ. ಪ್ರತಿಮನೆಗೂ ಈ ವರ್ಷ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ರೈತರ ಸಂಕಷ್ಟಗಳಿಗೆ ದೂರದೃಷ್ಟಿಯ ಪರಿಹಾರ ಒದಗಿಸುವುದು, ದುಡಿಯುವ ಕೈಗಳಿಗೆ ಉದ್ಯೋಗವಕಾಶ ಒದಗಿಸುವುದು ಸರ್ಕಾರದ ಆದ್ಯತಾ ವಲಯಗಳಲ್ಲಿ ಪ್ರಮುಖವಾಗಿದ್ದು, ನಾಡಿನ ಜನಸಾಮಾನ್ಯರ ಮೊಗದಲ್ಲಿ ಸಂತೃಪ್ತಿಯ ನಗೆ ಕಾಣಬೇಕು ಎನ್ನುವ ಆಶಯ ನಮ್ಮದು ಎಂದರು.
ರಾಷ್ಟ್ರಕವಿ ಕುವೆಂಪು ಅವರ ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂಬ ಸಾಲನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಜವಹರಲಾಲ್ ನೆಹರು, ಗೋಪಾಲಕೃಷ್ಣ ಗೋಖಲೆ, ಮೌಲಾನ ಅಬ್ದುಲ್ ಆಜಾದ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಎಲ್ಲ ವೀರ ಸೇನಾನಿಗಳ ಪಾದಕಮಲಗಳಿಗೆ ನಮಸ್ಕರಿಸುವುದಾಗಿ ಹೇಳಿದರು.
ಮಹಾತ್ಮಗಾಂಧೀಜಿ ಅವರ “ನನ್ನ ಜೀವನವೇ ನನ್ನ ಸಂದೇಶ ” ಎಂಬ ಮಾತು ನಮಗೆ ಆದರ್ಶವಾಗಿದ್ದು, ಗಾಂಧೀಜಿ ಅವರ 150ನೇ ಜಯಂತಿ ಆಚರಣೆ ಸಂಭ್ರಮದಲ್ಲಿ ರಾಜ್ಯಾದ್ಯಂತ “ಒಂದು ಸಾವಿರ ಗಾಂಧಿ 150ಒಂದು ರಂಗ ಪಯಣ” ಎಂಬ ಶೀರ್ಷಿಕೆಯಲ್ಲಿ ರಂಗ ಪ್ರದರ್ಶನವನ್ನು ಮಾಡಲಾಗುವುದು ಎಂದರು.
ಸ್ವಾಮಿ ವಿವೇಕಾನಂದರು ಶಿಖಾಗೋದಲ್ಲಿ ಸರ್ವಧರ್ಮ ಸಮ್ಮೇಳನವನ್ನು ಉದ್ದೇಶಿಸಿ ಮಾಡಿದ 150ನೇ ವರ್ಷಾಚರಣೆಯನ್ನು ಸರ್ಕಾರ ಸಂಭ್ರಮದಿಂದ ಆಚರಿಸಲಿದೆ ಎಂದು ಹೇಳಿದರು.
ವಿಜ್ಞಾನ, ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಬಾಹ್ಯಾಕಾಶ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕರ್ನಾಟಕದ ಪಾತ್ರ, ಸಾಧನೆ ಮಹತ್ವವಾಗಿದೆ. ವೀರರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿರಾಯಣ್ಣ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಕವಿಪುಂಗವರ ಪುಣ್ಯಭೂಮಿ ನಮ್ಮ ಕರ್ನಾಟಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಏಕೀಕರಣ ಚಳವಳಿಯಿಂದಾಗಿ ಅಖಂಡ ಕರ್ನಾಟಕ ಕನ್ನಡಿಗರ ಕನಸು ನನಸಾಗಿದೆ. ಕರ್ನಾಟಕದ ಅಖಂಡತೆಯ ಸ್ವರೂಪಕ್ಕೆ ಧಕ್ಕೆ ತರುವಂತಹ ಸ್ವರಗಳು ಆಗಾಗ್ಗೆ ಕೇಳಿ ಬರುತ್ತಲೇ ಇವೆ. ಅಂತಹ ಸ್ವರಗಳನ್ನು ಮೊಳಕೆಯೊಡೆಯುವ ಮುನ್ನವೇ ಹೊಸಕಿ ಹಾಕುವ ಕನ್ನಡಿಗರ ಆತ್ಮ ಪ್ರಜ್ಞೆ, ಕನ್ನಡಿಗರ ಸಂಕಲ್ಪ ಶಕ್ತಿಯ ಪ್ರತೀಕ. ಏಕೀಕೃತ ಕನ್ನಡಮನಕ್ಕೆ ಸಾವಿರ ಶರಣು ಎಂದು ಹೇಳಿದರು.
ಹಿಂದಿನ ಸರ್ಕಾರ ಮಂಡಿಸಿದ ಹಾಗೂ ಮೈತ್ರಿ ಸರ್ಕಾರ ಮಂಡಿಸಿರುವ ಆಯವ್ಯಯ ಎರಡೂ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪೂರಕವಾಗಿವೆ. ಎಲ್ಲ ಅಂಶಗಳನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತರಲು ನಮ್ಮ ಸರ್ಕಾರ ಕಾರ್ಯತತ್ಪರವಾಗಿದೆ. ಬೆಳಗಾವಿಯಲ್ಲಿ ನಗರಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಬೆಳಗಾವಿ ವಿಧಾನಮಂಡಲ ಅಧಿವೇಶನ ಆರಂಭಿಸಿ ಸುವರ್ಣ ಸೌಧ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ತೃಪ್ತಿ ಇದೆ. ಬೆಳಗಾವಿ ಜಿಲ್ಲೆಯಿಂದಲೇ ಗ್ರಾಮ ವಾಸ್ತವ್ಯ ಆರಂಭವಾಗಿದ್ದು, 47 ಗ್ರಾಮ ವಾಸ್ತವ್ಯದಲ್ಲಿ 27 ಗ್ರಾಮ ವಾಸ್ತವ್ಯವನ್ನು ಉತ್ತರ ಕರ್ನಾಟಕದಲ್ಲೇ ಮಾಡಲಾಗಿದೆ. ಬೆಳಗಾವಿಗೆ ರಾಜ್ಯ ಸರ್ಕಾರದ ಕೆಲವು ಇಲಾಖೆಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು.ಗೋವಾ, ಕಾಸರಗೂಡು, ಸೊಲ್ಲಾಪುರದಲ್ಲಿ ಕನ್ನಡ ಹಿತ ರಕ್ಷಣೆಗೆ ನೆರೆಯ ರಾಜ್ಯ ಸರ್ಕಾರಗಳೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಕನ್ನಡ ನಾಡನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯಬೇಕು. ರಾಷ್ಟ್ರದ ಪ್ರಗತಿ ನಕ್ಷೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರುವಂತೆ ಶ್ರಮಿಸುವ ಮಹಾತ್ಮಾಕಾಂಕ್ಷೆ ನಮ್ಮ ಸರ್ಕಾರದ್ದಾಗಿದೆ ಎಂದರು.
ರೈತರ ವಿಚಾರದಲ್ಲಿ ರಾಜಕೀಯ ಬೇಡ:
ರಾಜಕೀಯ ಇಚ್ಚಾಶಕ್ತಿ ಮೂಲಕ ಮೈತ್ರಿ ಸರ್ಕಾರ ರೈತರ ಹೆಗಲಿಗೆ ಹೆಗಲು ಕೊಡುತ್ತದೆ. ಅತ್ಯಂತ ಪಾರದರ್ಶಕವಾಗಿ ರೈತರ ಸಾಲ ಮನ್ನಾ ಮಾಡಲು ಕ್ರಮವ ಹಿಸಲಾಗಿದೆ ರೈತರ ವಿಚಾರದಲ್ಲಿ ರಾಜಕೀಯ ಮಾಡುವುದು ಆರೋಗ್ಯಕರವಲ್ಲ ಎಂದು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು.
ಸಾಲ ಮನ್ನಾ ಮಾಡುವ ವಿಚಾರದಲ್ಲಿ ಅಪನಂಬಿಕೆ ಬೇಡ. ಸರ್ಕಾರಿ ವಾಣಿಜ್ಯ ಬ್ಯಾಂಕುಗಳ 49 ಸಾವಿರ ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡಲು ತೀರ್ಮಾನಿಸಲಾಗಿದ್ದು, ಸರ್ಕಾರಿ ಬ್ಯಾಂಕುಗಳ ಸಾಲ ಮನ್ನಾ ಮಾಡಲು ಆದೇಶಿಸಲಾಗಿದೆ. ವಾಣಿಜ್ಯ ಬ್ಯಾಂಕುಗಳ ಸಾಲ ಮನ್ನಾ ಮಾಡಲು ಸದ್ಯದಲ್ಲೇ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದರು.
ನೀರಿನ ಸದ್ಬಳಕೆಗೆ ಇಸ್ರೇಲ್ ಮಾದರಿಯ ನೀರಾವರಿ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಶೂನ್ಯ ಬಂಡವಾಳ, ನೈಸರ್ಗಿಕ ಯೋಜನೆಯನ್ನು ಕಾಲ ಕಾಲಕ್ಕೆ ಅನುಷ್ಠಾನಕ್ಕೆ ತರಲಾಗುವುದು. ರೈತ ಸ್ಪಂದನ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಲ್ಲೂ ಹಮ್ಮಿಕೊಂಡು ರೈತರ ಬದುಕನ್ನು ಹಸನು ಮಾಡಲು ಹೊಸ ಚಿಂತನೆ ರೂಪಿಸಲಾಗಿದೆ.
ರೈತರನ್ನು ಚಿಂತೆಯಿಂದ ಮುಕ್ತಗೊಳಿಸಬೇಕೆಂದು ಶತ ಪ್ರಯತ್ನ ಪಡುತ್ತಿದ್ದು, ಆತ್ಮಹತ್ಯೆಗೆ ಯಾವ ರೈತರೂ ಶರಣಾಗಬಾರದು. ನಿಮ್ಮೊಂದಿಗೆ ಸರ್ಕಾರವಿದೆ. ಆತ್ಮಹತ್ಯೆ ಕರಾಳ ಹಾದಿ ಇಲ್ಲಿಗೆ ಮುಕ್ತಾಯಗೊಂಡು ರೈತರ ಮೊಗದಲ್ಲಿ ನಗೆ ಮೂಡಲಿ ಎಂದು ಆಶಿಸಿದರು.