ಬೆಂಗಳೂರು: ಮಾಂಡೋವಿ-ಮಹದಾಯಿ ಗೋವಾದ ಜೀವನದಿ.. ನೀರು ಹಂಚಿಕೆ ವಿವಾದಕ್ಕೆ ಮೂರು ದಶಕಗಳಿಗೂ ಹೆಚ್ಚಿನ ಇತಿಹಾಸವಿದೆ. ರಾಜ್ಯ ವಿಧಾನಸಭೆ ಚುನಾವಣೆವಗೂ ಮುನ್ನ ಹಾಗೂ ಕಳೆದ ಡಿಸೆಂಬರ್ನಲ್ಲಿ ವಿವಾದ ತಾರಕಕ್ಕೇರಿತ್ತು.
ಕಳಸಾ ಬಂಡೂರಿಗಾಗಿ ಉತ್ತರ ಕರ್ನಾಟಕದ ರೈತರು ಒಂದಲ್ಲ ಎರಡಲ್ಲ ಬರೋಬ್ಬರಿ ಒಂದು ವರ್ಷ ಹೋರಾಟ ನಡೆಸಿದ್ದರು. ಮುಷ್ಕರ ಕುಳಿತಿದ್ದರು. ಇದಕ್ಕೆ ಚಿತ್ರರಂಗವೂ ಬೆಂಬಲ ನೀಡಿತ್ತು. ಸರ್ಕಾರಗಳು ಬದಲಾದರೂ ಕುಡಿಯುವ ನೀರಿಗಾಗಿ ಹೋರಾಟ ಮಾತ್ರ ನಿಂತಿರಲಿಲ್ಲ. ಜನರ ದಾಹವೂ ತೀರಿರಲಿಲ್ಲ.
ಇನ್ನು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ – ಜೆಡಿಎಸ್ ನಡುವಣ ಹಗ್ಗ ಜಗ್ಗಾಟಕ್ಕೆ ಸಾಕ್ಷಿಯಾಗಿತ್ತು. ಕುಡಿವ ನೀರಿಗೆ ಗೋವಾ ಸಿಎಂ ಜತೆ ಸಂಧಾನ ಮಾಡಿ ನೀರು ಬಿಡಿಸುವ ವಾಗ್ದಾನ ಮಾಡಿದ್ದ ಬಿಎಸ್ವೈ ಬಳಿಕ ಮಾತು ತಪ್ಪಿದ್ದಾರೆ ಎಂದು ಆರೋಪಿಸಿ ರೈತರು, ಬಿಜೆಪಿ ಕಚೇರಿ ಎದುರೇ ಧರಣಿ ಕುಳಿತಿದ್ದರು.
ಕಳಸಾ-ಬಂಡೂರಿ ಯೋಜನೆ ಎಂದರೇನು?
ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ 200 ಟಿಎಂಸಿಗೂ ಅಧಿಕ ನದಿ ನೀರಲ್ಲಿ 7.56 ಟಿಎಂಸಿ ನೀರನ್ನು ಕುಡಿವ ನೀರಿಗಾಗಿ ಹರಿಸಿ ಎಂದು ಕರ್ನಾಟಕ ಕೇಳಿತ್ತು. ಆದರೆ, ಇದಕ್ಕೆ ಗೋವಾ ಒಪ್ಪಿರಲಿಲ್ಲ. ಈ ಸಂಬಂಧ ಪ್ರಕರಣ ನ್ಯಾಯಮಂಡಳಿ ಎದುರು ಹೋಗಿತ್ತು. ಜುಲೈ 27ರಂದು ಮಹಾದಾಯಿ ನ್ಯಾಯಾಧೀಕರಣ ಮಧ್ಯಂತರ ತೀರ್ಪು ಕೂಡಾ ಆಘಾತ ತಂದಿತ್ತು. ಕಾನೂನು ಹೋರಾಟ, ರೈತರ ಪ್ರತಿಭಟನೆ, ಸಾರ್ವಜನಿಕರ ಅಸಹನೆ ಮುಂದುವರಿದೇ ಇತ್ತು.
ಬೆಳಗಾವಿ ಜಿಲ್ಲೆ ಭೀಮಗಢ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಮಾಂಡೋವಿ (ಮಹದಾಯಿ) ನದಿ 77 ಕಿ.ಮೀ ದೂರ ಹರಿಯುತ್ತದೆ. ಈ ಪೈಕಿ ಕರ್ನಾಟಕದಲ್ಲಿ 29 ಕಿ.ಮೀ ಹಾಗೂ 52 ಕಿ.ಮೀ ಗೋವಾದಲ್ಲಿ ಹರಿಯುತ್ತದೆ. ಆದರೆ, 200 ಟಿಎಂಸಿ ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ. ಇದರಲ್ಲಿ ಗೋವಾ ಬಳಸಿಕೊಳ್ಳುತ್ತಿರುವುದು ಕೇವಲ 9 ಟಿಎಂಸಿ ನೀರನ್ನಂತೆ. ಇದನ್ನೇ ಮುಂದು ಮಾಡಿದ್ದ ಕರ್ನಾಟಕ ರಾಜ್ಯಕ್ಕೆ ಕುಡಿವ ನೀರಿಗಾಗಿ 7.56 ಟಿಎಂಸಿ ಹರಿಸಿ ಎಂದು ವಾದ ಮಂಡಿಸಿತ್ತು. ಈ ಎಲ್ಲ ವಾದ- ಪ್ರತಿವಾದಗಳನ್ನ ಆಲಿಸಿದ ಟ್ರಿಬ್ಯೂನಲ್ ಒಟ್ಟು 13.70 ಟಿಎಂಸಿ ನೀರನ್ನ ಹರಿಸುವಂತೆ ಮಹತ್ವದ ಆದೇಶ ನೀಡಿದೆ.