ನವದೆಹಲಿ:ಆ-14: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನೇತೃತ್ವದ ಮಹದಾಯಿ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆ ಒಟ್ಟು13. 7 ಟಿಎಂಸಿ ನೀರು ಹಂಚಿಕೆ ಮಾಡಿದೆ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸೇರಬೇಕಾದ ನೀರನ್ನು ಹಂಚಿಕೆ ಮಾಡಿದ್ದು, ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕೇವಲ 5.5 ಟಿಎಂಸಿ ಹಂಚಿಕೆ ಮಾಡಿದೆ. ಈ ಪೈಕಿ ಮಲಪ್ರಭಾ ಡ್ಯಾಂಗೆ 4 ಟಿಎಂಸಿ ನೀರು ಬಿಡಬೇಕು ಎಂದು ಹೇಳಿದೆ.
ಕರ್ನಾಟಕಕ್ಕೆ ಒಟ್ಟು 13.07 ಟಿಎಂಸಿ ನೀರು ಹಂಚಿಕೆ ಮಾಡಿದ್ದು, ಕಳಸಾ ನಾಲೆಯಿಂದ 1.72 ಟಿಎಂಸಿ, ಬಂಡೂರಿ ನಾಲೆಯಿಂದ 2.18 ಟಿಎಂಸಿ, ಮಹದಾಯಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಬಳಕೆ ಮಾಡಲು 1.50 ಟಿಎಂಸಿ ನೀರು ಹಾಗೂ ವಿದ್ಯುಚ್ಛಕ್ತಿಗೆ ಉತ್ಪಾದನೆಗೆ 8.02 ಟಿಎಂ ನೀರು ಹಂಚಿಕೆ ಮಾಡಲಾಗಿದೆ.
ಇನ್ನು ಹುಬ್ಬಳ್ಳಿ-ಧಾರವಾಡ ನಗರದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಹದಾಯಿ ನದಿಯಿಂದ ಮಲಪ್ರಭಾ ಜಲಾಶಯಕ್ಕೆ ನೀರು ತಿರುಗಿಸುವ ಕರ್ನಾಟಕದ ಪ್ರಸ್ತಾಪಕ್ಕೆ ನ್ಯಾಯ ಮಂಡಳಿ ಒಪ್ಪಿಗೆ ನೀಡಿದೆ.
ಕುಡಿಯುವ ಉದ್ದೇಶಕ್ಕಾಗಿ 7.5 ಟಿಎಂಸಿ ನೀರು ಹಂಚಿಕೆ ಮಾಡುವಂತೆ ಕರ್ನಾಟಕ, ನ್ಯಾಯಮಂಡಳಿಗೆ ಮನವಿ ಮಾಡಿತ್ತು.
ಮಹದಾಯಿಯಲ್ಲಿಯ 200 ಟಿಎಂಸಿ ಅಡಿ ನೀರಿನಲ್ಲಿ ಕೇವಲ 9 ಟಿಎಂಸಿ ಅಡಿ ನೀರನ್ನು ಗೋವಾ ಬಳಸಿಕೊಳ್ಳುತ್ತಿದೆ. ಇನ್ನುಳಿದ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಕರ್ನಾಟಕದಲ್ಲಿ ಹರಿಯುವ 45 ಟಿಎಂಸಿ ಅಡಿ ನೀರಿನ ಪೈಕಿ ನಾವು 14.98 ಟಿಎಂಸಿ ಅಡಿ ನೀರನ್ನು ಕೇಳುತ್ತಿದ್ದೇವೆ ಎಂದು ಕರ್ನಾಟಕ ವಾದ ಮಂಡಿಸಿತ್ತು.
ಕಳೆದ 5 ವರ್ಷದಲ್ಲಿ 105 ದಿನಗಳ ಕಾಲ ವಿಚಾರಣೆ ನಡೆದಿತ್ತು. ಕರ್ನಾಟಕದ ಪರ ಅಶೋಕ್ ದೇಸಾಯಿ, ಮೋಹನ್ ಕಾತರಕಿ, ಇಂದಿರಾ ಜೈಸಿಂಗ್ ವಾದ ಮಂಡಿಸಿದ್ದರು.
Mahadayi tribunal verdict,Karnataka Will Get 13.5 TMC water,