ಮಹಾದಾಯಿ ಹೋರಾಟಗಾರರ ಸಂಭ್ರಾಚರಣೆ

ಹುಬ್ಬಳ್ಳಿ- ದಶಕಗಳಿಂದ‌‌ ನೆನೆಗುದಿಗೆ ಬಿದ್ದಿದ್ದ, ಉತ್ತರ ಕರ್ನಾಟಕ ಜೀವಜಲವೆಂದೇ ಪ್ರಸಿದ್ದಿ ಹೊಂದಿದ್ದ, ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದ ನ್ಯಾಯಾಧಿಕರಣ ತೀರ್ಪು ಬಂದ ಹಿನ್ನೆಲೆ ಮಹಾದಾಯಿ ಹೋರಾಟಗಾರರು ಸಂಭ್ರಾಚರಣೆ ಮಾಡಿದ್ರು.

ಒಟ್ಟು 13.7 ಟಿ.ಎಂ.ಸಿ ನೀರನ್ನು ನೀಡಲು ನ್ಯಾಯಮಂಡಳಿ ತೀರ್ಪು ಹೊರಡಿಸಿದೆ. ತೀರ್ಪು ಹೊರ ಬೀಳುತ್ತಿದ್ದಂತೆ, ನಗರದ ಚೆನ್ನಮ್ಮ ವೃತ್ತದಲ್ಲಿ ಸೇರಿದ ವಿವಿಧ ಪರ ಸಂಘಟನೆಗಳ ಹೋರಾಟಗಾರರು, ದಶಕಗಳ ಹೋರಾಟಕ್ಕೆ ಸಂದ ಜಯದ ಖುಷಿಯಲ್ಲಿ ಮಳೆಯಲ್ಲಿಯೇ ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ, ಸಹಿ ಹಂಚಿ ಸಂಭ್ರಮಿಸಿದರು.

ಕುಡಿಯಲು 7.56 ಟಿಎಂಸಿ ಸೇರಿದಂತೆ ಕರ್ನಾಟಕ ಒಟ್ಟು 15 ಟಿಎಂಸಿ ನೀರು ಕೇಳಿತ್ತು. ಆದರೆ, ಮಹದಾಯಿಯಿಂದ ಕಳಸಾ ಯೋಜನೆಗೆ 1.72 ಮತ್ತು ಬಂಡೂರಿಗೆ 2.18 ಟಿಎಂಸಿ, ನದಿ ಪಾತ್ರದಲ್ಲಿ ಬಳಸಲು 1.5 ಟಿಎಂಸಿ ಹಾಗೂ ಜಲವಿದ್ಯುತ್ ಯೋಜನೆಗೆ 8.02 ಟಿಎಂಸಿ ನೀರು ಸೇರಿದಂತೆ 13.7 ಟಿಎಂಸಿ ನೀರನ್ನ ಮೀಸಲಿಡುವ ಬಗ್ಗೆ ನ್ಯಾಯಮಂಡಳಿ ತೀರ್ಪಿನಲ್ಲಿ ತಿಳಿಸಿದೆ.

ಮಹದಾಯಿ ಜಲವಿವಾದ ನ್ಯಾಯಮಂಡಳಿಯು ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದ ಆರು ವರ್ಷ, 106 ದಿನಗಳ ಕಾಲ ವಿಚಾರಣೆ ನಡೆಸಿತ್ತು. ಒಟ್ಟು 115 ಕಿಲೋ ಮೀಟರ್ ಉದ್ದ ಹರಿಯುವ ನದಿ ಕರ್ನಾಟಕ, ಮಹಾರಾಷ್ಟ್ರದಿಂದ ಹರಿದು ಗೋವಾದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಗೋವಾದಲ್ಲಿ 1580 ಚದರ ಕಿಲೋ ಮೀಟರ್ ಜಲಾನಯನ ಪ್ರದೇಶ, ಕರ್ನಾಟಕದಲ್ಲಿ 375 ಚದರ ಕಿಲೋ ಮೀಟರ್ ಮತ್ತು ಮಹಾರಾಷ್ಟ್ರದಲ್ಲಿ 77 ಚದರ ಕಿಲೋ ಮೀಟರ್ ಜಲಾನಯನ ಪ್ರದೇಶ ಇದೆ.

ಆದರೆ, ಈ ತೀರ್ಪಿನ ಬಗ್ಗೆ ಕರ್ನಾಟಕದ ಪರ ಹಿರಿಯ ವಕೀಲ ಮೋಹನ್ ಕಾತರಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ