ಸಂವಿಧಾನದ ಮೂಲಭೂತ ಹಕ್ಕುಗಳ ತಿದ್ದುಪಡಿ ಸಾಧ್ಯವಿಲ್ಲ: ನ್ಯಾ. ವಿ.ಗೋಪಾಲಗೌಡ

 

ಬೆಂಗಳೂರು, ಆ.13- ಸಂವಿಧಾನದ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.
ನಗರದ ಗಾಂಧಿಭವನದಲ್ಲಿ ಸಮಂಜಸ ಸಂಸ್ಥೆ ಆಯೋಜಿಸಿದ್ದ ಬಹುಧರ್ಮಗಳು ಮತ್ತು ಭಾರತೀಯತೆ ಒಂದು ವ್ಯಾಖ್ಯಾನ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾತ್ಯಾತೀತ ತತ್ವದ ಮೇಲೆ ಬಹುಮತೀಯ ರಾಷ್ಟ್ರವಿದ್ದು, ಸಂವಿಧಾನದ ಮೂಲಭೂತ ಹಕ್ಕುಗಳನ್ನು ತೆಗೆಯುವುದು, ತಿದ್ದುಪಡಿ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಬಹುಮತೀಯ ರಾಷ್ಟ್ರವಾಗಿರುವ ಭಾರತ ಒಂದು ಮತದ ರಾಷ್ಟ್ರವಾಗಬೇಕು ಎಂದು ಪ್ರತಿಪಾದಿಸುವುದು ಅಮಾನವೀಯ, ಸಂವಿಧಾನ ವಿರೋಧಿ ಎಂದರೆ ತಪ್ಪಾಗಲಾರದು. ಹಾಗೆಯೇ ಸಂವಿಧಾನ ತಿದ್ದುಪಡಿ ಮಾಡುತ್ತೇನೆ ಎನ್ನುವುದು ಕೂಡ ನಾಚಿಕೆಗೇಡು ಎಂದು ಹೇಳಿದರು.
ಸಂವಿಧಾನದ ಅಡಿಯಲ್ಲಿ ಸಂವಿಧಾನ ರಕ್ಷಣೆ ಮಾಡುವುದಾಗಿ ಪ್ರಮಾಣವಚನ ಸ್ವೀಕಾರ ಮಾಡಿ ಸಂವಿಧಾನವನ್ನು ವಿರೋಧ ಮಾಡುವ ಕೇಂದ್ರ ಸಚಿವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೇಗೆ ಸಹಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕಾಗಿದೆ. ರಾಜಕೀಯ ಲಾಭಕ್ಕಾಗಿ ದೇಶದ ಪರಿಸ್ಥಿತಿಯನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗುತ್ತಿದೆ. ಸಂವಿಧಾನ ವಿರೋಧಿ ನಡವಳಿಕೆಗಳು ದೇಶದಲ್ಲಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪಟ್ಟಭದ್ರ ಹಿತಾಸಕ್ತಿಗಳು, ಕೋಮುವಾದಿಗಳು ದೇಶಕ್ಕೆ ಒಂದೇ ಮತವಿರಬೇಕು ಎಂಬ ತಪ್ಪು ವ್ಯಾಖ್ಯಾನ ಮಾಡುತ್ತಿವೆ ಎಂದು ಹೇಳಿದರು.

ಮತ ವಿಭಜನೆ ರಾಷ್ಟ್ರ ವಿಕಾಸಕ್ಕೆ ಪೂರಕವಾಗುವುದಿಲ್ಲ. ವಿವಿಧತೆಯಲ್ಲಿ ಏಕತೆಯುಳ್ಳ ಭಾರತದಲ್ಲಿ ಸರ್ವರ ಕಲ್ಯಾಣಕ್ಕಾಗಿ, ಏಳ್ಗೆಗಾಗಿ ಶ್ರಮಿಸಬೇಕಾಗುತ್ತದೆ. ಬಹುಮತೀಯ ರಾಷ್ಟ್ರವೆಂದು ಒಪ್ಪಿರುವ ಭಾರತ. ಕೇವಲ ಹಿಂದೂ ರಾಷ್ಟ್ರವಲ್ಲ ಎಂದ ಅವರು, ಚುನಾವಣಾ ಆಯೋಗ, ವಿಧಾನಸಭೆ, ಸಂಸತು, ಪ್ರಧಾನಿ, ಮುಖ್ಯಮಂತ್ರಿ, ಸ್ಪೀಕರ್, ಸುಪ್ರೀಕೋರ್ಟ್ ಎಲ್ಲವೂ ಸಂವಿಧಾನದ ಅಡಿಯಲ್ಲೇ ಬರುತ್ತದೆ. ಪ್ರಜಾಭುತ್ವದ ಆಡಳಿತ ನಡೆಸುವಾಗ ರಾಜಕೀಯ ಪಕ್ಷಗಳು ಎಲ್ಲರನ್ನು ದಿಕ್ಕು ತಪ್ಪಿಸುವುದು ಸರಿಯಲ್ಲ. ಜನರನ್ನು ದಾರಿತಪ್ಪಿಸುವಂತಹ ವ್ಯಾಖ್ಯಾನಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ತಜ್ಞ ಪೆÇ್ರ.ಕೆ.ಈ.ರಾಧಾಕೃಷ್ಣ ಮಾತನಾಡಿ, ಮಾತನಾಡುವ ನಾಲಿಗೆಯನ್ನು ಆಯುಧವಾಗಿ ಬಳಸಲಾಗುತ್ತಿದೆ. ಇದನ್ನು ಸ್ಪೀಚ್ ಬಾಂಬ್ ಎಂದು ಕರೆಯಬಹುದು. ಈ ರೀತಿಯ ಹೇಳಿಕೆಗಳು ಜನರನ್ನು ಒಗ್ಗೂಡಿಸುವ ಬದಲು ವಿಭಜನೆಗೆ ಅವಕಾಶ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ 3ಸಾವಿರ ಜಾತಿ, 25 ಸಾವಿರ ಉಪ ಜಾತಿಗಳಿವೆ. 21ನೇ ಶತಮಾನದಲ್ಲೂ ರೋಗಗ್ರಸ್ತ ಮನಸ್ಸುಗಳನ್ನು ಕಾಣ ಬಹುದಾಗಿದೆ. ಪ್ರಜಾಪ್ರಭುತ್ವವವನ್ನು ಕೈಯಲ್ಲಿಡಿದಿರುವ ರಾಜಕೀಯ ಪಕ್ಷಗಳಿಂದ ದೇಶದ ಮೂಲ ಸ್ವರೂಪಕ್ಕೆ ಇದರಿಂದ ಧಕ್ಕೆಯಾಗುತ್ತಿದೆ ಎಂದು ಆಂತಕ ವ್ಯಕ್ತಪಡಿಸಿದರು.
ವಿಚಾರ ಸಂಕಿರಣದಲ್ಲಿ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ, ನ್ಯಾಯವಾದಿ ಎಸ್.ಎ.ಅಹಮದ್, ಪತ್ರಕರ್ತ ಮಂಜುನಾಥ ಅದ್ದೆ, ಮುರಳೀಧರ ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ