ತ್ತೀಚೆಗಷ್ಟೇ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಹೌದು ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ನಲ್ಲಿ ಹಲವು ಫೈಟ್ ದೃಶ್ಯಗಳಿದ್ದು ಅವುಗಳು ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಸರೈನೋಡು ಚಿತ್ರದ ದೃಶ್ಯಗಳಂತಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಟೀಕಿಸಿದ್ದರು.
ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿರುವುದು ಸಹೋದರರಾದ ರಾಮ್ ಮತ್ತು ಲಕ್ಷ್ಮಣ್ ಎಂಬುವರು. ಇವರಿಬ್ಬರು ತೆಲುಗಿನ ಖ್ಯಾತ ಸಾಹಸ ನಿರ್ದೇಶಕರು. ಸರೈನೋಡು ಚಿತ್ರಕ್ಕೆ ರಾಮ್ ಮತ್ತು ಲಕ್ಷ್ಮಣ್ ಅವರೇ ಸಾಹಸ ನಿರ್ದೇಶನ ಮಾಡಿದ್ದರು. ಇದೀಗ ಆ ಚಿತ್ರದಲ್ಲಿ ಬಳಸಿದ್ದ ಸಾಹಸ ದೃಶ್ಯಗಳನ್ನೇ ಸೀತಾರಾಮ ಕಲ್ಯಾಣ ಚಿತ್ರದಲ್ಲೂ ಬಳಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಚಿತ್ರದ ನಾಯಕ ನಿಖಿಲ್ ಕುಮಾರ್, ಪ್ರತಿಯೊಬ್ಬ ಸಾಹಸ ನಿರ್ದೇಶಕರಿಗೂ ತಮ್ಮದೇ ಸ್ವಂತ ಮಾದರಿ ಇರುತ್ತದೆ. ಅಂತೆ ತೆಲುಗಿನಲ್ಲಿ ಅವರ ಸಾಹಸ ನಿರ್ದೇಶನವನ್ನು ಕನ್ನಡ ಪ್ರೇಕ್ಷಕರು ವೀಕ್ಷಿಸಿ ಇಷ್ಟಪಟ್ಟಿದ್ದಾರೆ. ಇನ್ನು ತೆಲುಗಿಗಿಂತ ಉತ್ತಮವಾಗಿ ಕನ್ನಡದಲ್ಲಿ ಫೈಟ್ ಸೀನ್ ಗಳನ್ನು ತೆಗೆಯಲಾಗಿದೆ. ನಮ್ಮ ಪ್ರಯತ್ನ ಕನ್ನಡದ ಪ್ರೇಕ್ಷಕರನ್ನು ಮತ್ತು ಜನರನ್ನು ಸಂತೋಷಪಡಿಸುವುದು ಎಂದು ಹೇಳಿದ್ದಾರೆ.
ಇನ್ನು ನಮಗೆ ಟೀಕೆಗಳಿಗಿಂತ ಹೆಚ್ಚು ಪ್ರೋತ್ಸಾಹ ಸಿಕ್ಕಿದೆ. ಟೀಸರ್ ನಿಂದ ಅಭಿಮಾನಿಗಳಿಗೆ ಅಸಮಾಧಾನವಾಗಿದ್ದರೆ, ಚಿತ್ರದ ಟ್ರೇಲರ್ ಮತ್ತು ಚಿತ್ರವನ್ನು ಇನ್ನಷ್ಟು ಉತ್ತಮವಾಗಿ ನೀಡಲು ಬಯಸುತ್ತೇವೆ ಎಂದರು.
ಚಿತ್ರವನ್ನು ಎ ಹರ್ಷ ನಿರ್ದೇಶಿಸಿದ್ದಾರೆ. ಇನ್ನು ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಹಾಗೂ ಹಾಡುಗಳ ಚಿತ್ರೀಕರಣ ಭಾಗಿಯಿದ್ದು ಸೆಪ್ಟೆಂಬರ್ ವೇಳೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಸಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ನಿಖಿಲ್ ಹೇಳಿದ್ದಾರೆ.
ಸದ್ಯಕ್ಕೆ ಸರೈನೋಡು ಚಿತ್ರದ ಕಥೆಯನ್ನು ಬಳಸಿಕೊಳ್ಳಲಾಗಿದೆಯಾ ಅಥವಾ ಬರೀ ಫೈಟ್ ಸೀನ್ ಗಳನ್ನು ಮಾತ್ರ ಬಳಸಿಕೊಳ್ಳಲಾಗಿದೆಯಾ ಎಂಬುವದು ತಿಳಿಯಬೇಕಾದರೆ ಚಿತ್ರ ಬಿಡುಗಡೆವರೆಗೂ ಕಾಯಬೇಕು.