ಚಂದ್ರಯಾನ-2 ಯೋಜನೆಯಲ್ಲಿ ಪ್ರಮುಖ ಮಾರ್ಪಾಡು

 

ಬೆಂಗಳೂರು, ಆ.12-ಇಡೀ ವಿಶ್ವದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಚಂದ್ರಯಾನ-2 ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಪ್ರಮುಖ ಮಾರ್ಪಾಡು ಮಾಡಿದೆ. ಈ ಹಿಂದೆ ನಿರ್ಧರಿಸಿದ್ದ ಯೋಜನೆಯಲ್ಲಿ ಬದಲಾವಣೆ ಮಾಡಿರುವ ಇಸ್ರೋ ಚಂದಿರನ ಮೇಲೆ ಮೊದಲು ಲ್ಯಾಂಡರ್ ಪರಿಭ್ರಮಣೆ ನಡೆಸಿ ನಂತರ ಅಧ್ಯಯನ ಕೈಗೊಳ್ಳಲು ತೀರ್ಮಾನಿಸಿದೆ.

ಚಂದ್ರಯಾನ್-1 ನಂತರ ಈಗ ಚಂದ್ರಯಾನ್-2 ಯೋಜನೆಗಾಗಿ ಇಸ್ರೋ ಹಲವಾರು ವರ್ಷಗಳ ಅಧ್ಯಯನ ಮತ್ತು ಸಂಶೋಧನೆ ನಡೆಸಿದೆ. ಕಳೆದ ಜೂನ್ 19ರಂದು ನಡೆದ ಪರಾಮರ್ಶೆ ಸಭೆಯಲ್ಲಿ ಉದ್ದೇಶಿತ ಚಂದ್ರಯಾನ್-2 ಯೋಜನೆಯಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.
ಈ ಮೊದಲು ರೋವರ್‍ನನ್ನು ಹೊತ್ತೊಯ್ಯಲಿರುವ ಲ್ಯಾಂಡರ್, ಆರ್ಬಿಟರ್‍ನಿಂದ ಪ್ರತ್ಯೇಕಗೊಂಡ ನಂತರ ನೇರವಾಗಿ ಚಂದ್ರನ ನೆಲದ ಮೇಲೆ ಸ್ಪರ್ಶಿಸಬೇಕಿತ್ತು. ಆದರೆ ಹೊಸ ಮಾರ್ಪಾಡಿನ ಪ್ರಕಾರ, ಲ್ಯಾಂಡರ್ ನೌಕೆಯ ಚಂದ್ರನ ಮೃದು ನೆಲದ ಮೇಲೆ ಮೊದಲು ನೇರವಾಗಿ ಇಳಿಯಲಿದೆ. ನಂತರ ರೋವರ್‍ನನ್ನು ಅಲ್ಲಿ ಇಳಿಸಲಿದೆ. ಬಳಿಕ ಶಶಾಂಕನ ಸುತ್ತ ಪ್ರದಕ್ಷಿಣೆ ಹಾಕಿ ಅದರ ಅಳತೆ ಹಾಗೂ ಮತ್ತಿತರ ಸಂಗತಿಗಳ ಬಗ್ಗೆ ಅಧ್ಯಯನ ನಡೆಸಲು ವೇದಿಕೆ ಸಜ್ಜುಗೊಳಿಲಿದೆ.
ಚಂದ್ರಯಾನ್-1 ಯೋಜನೆಗಿಂತ ಇದು ತೀರಾ ಭಿನ್ನವಾಗಿದೆ. ಚಂದ್ರಯಾನ್-1ನಲ್ಲಿ ಲ್ಯಾಂಡರ್ ಕೇವಲ ಚಂದ್ರನ ಸುತ್ತ ಪರಿಭ್ರಮಣೆ ನಡೆಸಿತ್ತು. ಆದರೆ ಚಂದ್ರನ ಮೃದು ಮೇಲ್ಮೈ ಮೇಲೆ ರೋವರ್‍ನನ್ನು ಇಳಿಸಿ ಹೆಚ್ಚಿನ ಅಧ್ಯಯನ ನಡೆಸಲಾಗಿರಲಿಲ್ಲ. ಈಗ ಚಂದ್ರಯಾನ್-2 ಸುಧಾರಿತ ಯೋಜನೆಯಾಗಿದೆ. ಇದರಲ್ಲಿ ಲ್ಯಾಂಡರ್‍ನ ಹಾರ್ಡ್‍ವೇರ್‍ಗಳನ್ನು ಅತ್ಯಾಧುನೀಕರಣಗೊಳಿಸಲಾಗಿದೆ.

ಚಂದ್ರನ ಕಕ್ಷೆ ಸುತ್ತ ಪರಿಭ್ರಮಿಸುವ ರೋವರ್ ತರುವಾಯ ಬ್ಯಾಟರಿ ಪರೀಕ್ಷೆಗಳಿಗಾಗಿ ಧೂಳಿನಿಂದ ಕೂಡಿದ ಹಳ್ಳಕೊಳ್ಳ ಪ್ರದೇಶದ ಮೇಲೂ ಇಳಿದು ಹೆಚ್ಚಿನ ಪ್ರಯೋಗಕ್ಕೆ ಅನುವು ಮಾಡಿಕೊಡಲಿದೆ.
ಈ ಹಿಂದೆ ರಷ್ಯಾದ ರೋಸ್‍ಕೊಮೊಸ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಹಭಾಗಿತ್ವದಲ್ಲಿ ಚಂದ್ರಯಾನ ಯೋಜನೆ ಕೈಗೊಳ್ಳುವ ಉದ್ದೇಶವನ್ನು ಇಸ್ರೋ ಹೊಂದಿತ್ತಾದರೂ, ನಂತರ ಈಗ ತನ್ನದೇ ಆದ ಲ್ಯಾಂಡರ್ ಮತ್ತು ರೋವರ್ ಮೂಲಕ ಏಕಾಂಗಿಯಾಗಿ ಈ ಯೋಜನೆಯನ್ನು ಸಾಕಾರಗೊಳಿಸಲು ಮುಂದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ