ಪ್ರಜಾಪ್ರಭುತ್ವ ವ್ಯವಸ್ಥೆ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದು, ಬದಲಾವಣೆ ಅಸಾಧ್ಯ: ಎಚ್.ಡಿ.ದೇವೇಗೌಡ

 

ಬೆಂಗಳೂರು, ಆ.12-ಪ್ರಜಾಪ್ರಭುತ್ವ ವ್ಯವಸ್ಥೆ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದು, ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಅಂಕಿತ ಪುಸ್ತಕ ಪ್ರಕಾಶನ ವತಿಯಿಂದ ಮಾಜಿ ಸಂಸದ ಡಾ.ಬಿ.ಎಲ್.ಶಂಕರ್, ಪೆÇ್ರ.ವಲೇರಿಯನ್ ರೊಡ್ರಿಗಸ್ ಅವರ ಹಾಗೂ ಪೆÇ್ರ.ಜೆ.ಎಸ್.ಸದಾನಂದ ಅವರು ಅನುವಾದ ಮಾಡಿರುವ ಭಾರತದ ಸಂಸತ್ತು ಒಂದು ಕಾರ್ಯನಿರತ ಪ್ರಜಾಪ್ರಭುತ್ವ ಕೃತಿಯ ಕನ್ನಡ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಹರಲಾಲ್ ನೆಹರೂ ಅವರು ಪ್ರಜಾಪ್ರಭುತ್ವ ಭದ್ರವಾದ ಬುನಾದಿಯ ಮೇಲೆ ನಿಲ್ಲಲು ಅಡಿಪಾಯ ಹಾಕಿದ್ದಾರೆ. ಮಹಾತ್ಮಗಾಂಧೀಜಿಯವರು ಭಾರತದ ರಾಷ್ಟ್ರಪಿತ. ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದವರು ನೆಹರೂ ಅವರು ಎಂದು ಶ್ಲಾಘಿಸಿದರು.
1952ರಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜಾತಿ ಪ್ರಭಾವ ಇರಲಿಲ್ಲ. ಭಾಷಾವಾರು ಪ್ರಾಂತ್ಯ ವಿಂಗಡಣೆಯಾದ ನಂತರ ಆಯಾ ಪ್ರಾಂತ್ಯಗಳಲ್ಲಿ ಜಾತಿಯ ಹಿಡಿತ ಪ್ರಾರಂಭವಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಚರ್ಚೆ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ದಿನೇ ದಿನೇ ಶಕ್ತಿ ಕಳೆದುಕೊಳ್ಳುತ್ತಿದ್ದು, ಪ್ರಾದೇಶಿಕ ಪಕ್ಷಗಳು ತಲೆ ಎತ್ತುತ್ತಿವೆ. ಜಾತಿ, ಭಾಷೆ ಪ್ರಭಾವವೂ ಹೆಚ್ಚಾಗುತ್ತಿದೆ. ತಾವು ಮೂಲ ಕಾಂಗ್ರೆಸ್‍ನಲ್ಲಿದ್ದು, ಬಂಡಾಯ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಬಂದು ಆರು ದಶಕಗಳು ಕಳೆದಿವೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಶೇ.33 ರಷ್ಟು ಮಹಿಳಾ ಪ್ರಾತಿನಿಧ್ಯ ಇರಬೇಕೆಂಬ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆಯಾಗಿದ್ದರೂ ಇನ್ನೂ ಲೋಕಸಭೆಯ ಅಂಗೀಕಾರ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾವು ಪ್ರಧಾನಿಯಾಗಿ 10 ತಿಂಗಳು 21 ದಿನದ ಆಡಳಿತದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯನ್ನೂ ಹೊರತರಲು ಸಾಧ್ಯವಾಗಿಲ್ಲ. 15 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ರಾಜಕೀಯ ಹುಚ್ಚು ಸಾಕಾಗಿದೆ. ಪ್ರಜೆಯಾಗಿ ಏನು ಮಾಡಬೇಕೆಂಬುದು ಮನಸ್ಸಿನಲ್ಲಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಪಾತ್ರ ಪ್ರಮುಖವಾಗಿದೆ. ತಾವು ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ನಿತ್ಯ ಒಂದಲ್ಲ ಒಂದು ವಿಚಾರ ಪ್ರಸ್ತಾಪ ಮಾಡಿದರೂ ಆಗಿನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಸಮರ್ಥವಾದ ಉತ್ತರ ಕೊಟ್ಟು ಆರೋಪಗಳನ್ನು ಅಲ್ಲಗಳೆಯುವ ಪ್ರಯತ್ನ ಮಾಡುತ್ತಿದ್ದರು. ಅರಸು ಅಂತಹವರು ಮತ್ತೊಬ್ಬರಿಲ್ಲ. ಸದನದ ನಾಯಕನ ಜವಾಬ್ದಾರಿಯನ್ನು ಬಹಳ ಮುಖ್ಯವಾಗಿ ನಿರ್ವಹಿಸಿದ್ದರು ಎಂದು ಶ್ಲಾಘಿಸಿದರು.
ಪಕ್ಷ ರಾಜಕಾರಣದಿಂದಾಗಿ ಸದನ ಸಮಿತಿಗಳು ಮಹತ್ವ ಕಳೆದುಕೊಂಡಿವೆ. ಸಂಸತ್ತಿನ ಒಪ್ಪಿಗೆ ಪಡೆದು ಖರ್ಚು ಮಾಡಿದ ಹಣದ ಪರಿಶೀಲನೆ ಮಾಡುವ ಜವಾಬ್ದಾರಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಇರುತ್ತದೆ ಎಂದರು.

ನೆಹರೂ ಅವರು ಪ್ರಧಾನಿಯಾಗಿದ್ದಾಗ ಅವರ ಅಳಿಯ ಫಿರೋಜ್‍ಗಾಂಧಿ ಕಾಂಗ್ರೆಸ್‍ನಲ್ಲಿದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರು. ಈಗ ಭ್ರಷ್ಟಾಚಾರವಿದ್ದರೂ ಪಕ್ಷ ನೀಡಿದ ವಿಪ್‍ನಿಂದಾಗಿ ಸುಮ್ಮನಿರುವಂತಾಗುತ್ತದೆ ಎಂದು ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ಭಾರತದ ಸಂಸತ್ತು ಒಂದು ಕಾರ್ಯನಿರತ ಪ್ರಜಾಪ್ರಭುತ್ವ ಕೃತಿ ಕನ್ನಡದಲ್ಲಿ ಪ್ರಕಟವಾಗಿರುವುದಕ್ಕೆ ಸಂತೋಷವಾಗುತ್ತದೆ. ಸಮಾಜದ ಜ್ಞಾನ ಕನ್ನಡ ಭಾಷೆಗೆ ಅನುವಾದವಾಗುವ ಅಗತ್ಯವಿದೆ. ಇಂಗ್ಲೀಷ್ ಶಿಕ್ಷಣ ವ್ಯವಸ್ಥೆಯನ್ನು ಅನುಕರಣೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, ಕ್ಯಾಬಿನೆಟ್ ಕಾರ್ಯದರ್ಶಿಯಾಗಿದ್ದ ಸುಬ್ರಹ್ಮಣ್ಯ ಅವರು ಬರೆದಿರುವ ಟರ್ನಿಂಗ್ ಪಾಯಿಂಟ್ ಪುಸ್ತಕದಲ್ಲಿ ದೇವೇಗೌಡರನ್ನು ಕುರಿತು ಶ್ಲಾಘನೀಯ ಮಾತುಗಳನ್ನು ಬರೆದಿದ್ದಾರೆ. ಅಧಿಕಾರಿ ವರ್ಗದಿಂದ ಮೆಚ್ಚುಗೆ ಪಡೆದವರು ದೇವೇಗೌಡರು ಎಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಹಲವು ಮಹತ್ವದ ಮಾತುಗಳನ್ನಾಡಿದರು.

ಕೃತಿಯ ಕರ್ತೃ ಹಾಗೂ ಮಾಜಿ ಸಂಸದ ಡಾ.ಬಿ.ಎಲ್.ಶಂಕರ್ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆ ಬಗ್ಗೆ ಆಳವಾದ ಅಧ್ಯಯನ ಮಾಡಿ ಈ ಸಂಶೋಧಿತ ಕೃತಿಯನ್ನು ರಚಿಸಲಾಗಿದೆ. ಅಧ್ಯಕ್ಷೀಯ ಪದ್ಧತಿಗಿಂತ ಸಂಸದೀಯ ಪ್ರಜಾಪ್ರಭುತ್ವ ಈ ದೇಶಕ್ಕೆ ಸೂಕ್ತವಾಗಿದೆ ಎಂದರು.
ಕೃತಿಯ ಮತ್ತೊಬ್ಬ ಕರ್ತೃವಾದ ಪೆÇ್ರ.ವಲೇರಿಯನ್ ರೊಡ್ರಿಗಸ್ ಮಾತನಾಡಿ, ಕೃತಿಯಲ್ಲಿ ಸಂಸತ್ತಿನ ಪರಿಚಯ, ಆಯಾ ಪಕ್ಷಗಳ ಹೈಕಮಾಂಡ್‍ನ ಪ್ರಭಾವ, ರಾಷ್ಟ್ರೀಯ ಭಾಷೆ, ರಾಷ್ಟ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ, ಸಂಸತ್ತು ಮತ್ತು ನ್ಯಾಯಾಂಗದ ಸಂಬಂಧ, ರಾಜ್ಯಸಭೆ-ಲೋಕಸಭೆ ಸಂಬಂಧ ಸೇರಿದಂತೆ ಹಲವು ಮಹತ್ವದ ವಿಚಾಋಗಳ ಕುರಿತು ಬರೆಯಲಾಗಿದೆ. ಸಂಸದೀಯ ಪ್ರಭುತ್ವದ ಕನ್ನಡಿ ಸಂಸತ್ತಾಗಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕೃತಿಯ ಅನುವಾದ ಪೆÇ್ರ.ಜೆ.ಎಸ್.ಸದಾನಂದ, ಅಂಕಿತಾ ಪ್ರಕಾಶನದ ಪ್ರಕಾಶ್ ಕೊಂಬತ್ತಳ್ಳಿ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ