ತುಮಕೂರು, ಆ.12- ಗ್ರಾಹಕರು ಠೇವಣಿ ಇಟ್ಟ ಹಣಕ್ಕೆ ಸುರಕ್ಷತೆ ಹಾಗೂ ಖಾತರಿ ಒದಗಿಸಬೇಕಾದ ಬ್ಯಾಂಕಿನ ಸಿಬ್ಬಂದಿಯೇ ಬಡ ಗ್ರಾಹಕರ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಹಣ ಡ್ರಾ ಮಾಡಿಕೊಡುವುದಾಗಿ ಅನಕ್ಷರಸ್ಥ ಗ್ರಾಹಕರನ್ನು ನಂಬಿಸಿ ಬ್ಯಾಂಕ್ ಗುಮಾಸ್ತನೋರ್ವ ಲಕ್ಷಾಂತರ ರೂ.ವಂಚಿಸಿ ಕಾಣೆಯಾಗಿರುವ ಘಟನೆ ಕೊರಟಗೆರೆಯಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಎಸ್‍ಬಿಎಂ ಬ್ಯಾಂಕಿನ ಗುಮಾಸ್ತ ಚಂದ್ರು ಅಲಿಯಾಸ್ ಚಂದ್ರಶೇಖರ್ ವಂಚನೆ ಮಾಡಿ ಪರಾರಿಯಾದ ನೌಕರ. ಬ್ಯಾಂಕಿಗೆ ಬರುವ ವೃದ್ಧರು, ಅನಕ್ಷರಸ್ಥರನ್ನು ಗುರಿಯಾಗಿಸಿಕೊಂಡು ಅವರ ಖಾತೆಯಿಂದ ತನ್ನ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ನೂರಾರು ರೈತರ ಬೆಳೆವಿಮೆ ಮತ್ತು ಬೆಳೆ ಪರಿಹಾರ ಹಣವನ್ನು ಈತ ದೋಚಿದ್ದು, ಕಳ್ಳಿಪಾಳ್ಯ ಗ್ರಾಮದ ರೈತ ಗರುಡಪ್ಪ ಎಂಬವರ ಖಾತೆಯಿಂದ 1ಲಕ್ಷ 80ಸಾವಿರ ರೂ.ದೋಚಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಆರೋಪಿ ಕಾಣೆಯಾಗಿದ್ದಾನೆ.
ಸಂಶಯ ಬರಬಾರದು ಎಂಬ ಉದ್ದೇಶದಿಂದ ರೈತರ ಹಣವನ್ನು ತನ್ನ ಖಾತೆಯ ಜೊತೆ ಸ್ನೇಹಿತರ ಖಾತೆಗೂ ವರ್ಗಾವಣೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ವಂಚನೆ ಪ್ರಕರಣದಲ್ಲಿ ಗುಮಾಸ್ತನ ಜೊತೆ ಬ್ಯಾಂಕಿನ ವ್ಯವಸ್ಥಾಪಕ ರು ಮತ್ತು ಕ್ಯಾಷಿಯರ್ ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದ್ದು, ಅವರ ವಿರುದ್ಧವೂ ದೂರು ದಾಖಲಾಗಿದೆ.
ವಂಚನೆ ಪ್ರಕರಣದ ಸಂಬಂಧ ಬ್ಯಾಂಕಿನ ಅಧಿಕಾರಿಗಳು ಉನ್ನತ ಮಟ್ಟದ ತನಿಖೆ ಆರಂಭಿಸಿದ್ದಾರೆ.