ಫುಟ್‍ಪಾತ್‍ನ ಕಬ್ಬಿಣದ ತಡೆಗೋಡೆಗೆ ಕಾರೊಂದು ಡಿಕ್ಕಿ ಹೊಡೆದು ಮಗುಚಿಬಿದ್ದ ಪರಿಣಾಮ ಬೆಂಗಳೂರು ಮೂಲದ ಐಟಿ ಉದ್ಯೋಗಿ ಸಾವು

 

ಮದ್ದೂರು, ಆ.12-ಫುಟ್‍ಪಾತ್‍ನ ಕಬ್ಬಿಣದ ತಡೆಗೋಡೆಗೆ ಕಾರೊಂದು ಡಿಕ್ಕಿ ಹೊಡೆದು ಮಗುಚಿಬಿದ್ದ ಪರಿಣಾಮ ಬೆಂಗಳೂರು ಮೂಲದ ಐಟಿ ಉದ್ಯೋಗಿ ಮೃತಪಟ್ಟಿದ್ದು, ಚಾಲಕ ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ಪಟ್ಟಣದ ಮಳವಳ್ಳಿ ರಸ್ತೆಯಲ್ಲಿ ಮಧ್ಯರಾತ್ರಿ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರಂ 10ನೇ ಕ್ರಾಸ್‍ನ ಯಲ್ಲಪ್ಪ ಗಾರ್ಡನ್ ನಿವಾಸಿ, ಐಟಿ ಉದ್ಯೋಗಿ ಉಮೇಶ್(58) ಮೃತ ದುರ್ದೈವಿ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಮದ್ದೂರು-ಮಂಡ್ಯ ಆಸ್ಪತ್ರೆಗಳಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಉಮೇಶ್ ಅವರ ಕಾರು ಚಾಲಕ ಮೋಹನ್‍ಕುಮಾರ್ ಅವರ ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು, ಬೆಸ್ಕಾಂನ ಉದ್ಯೋಗಿಗಳಾದ ಮಹೇಶ್ ಮತ್ತು ಹರೀಶ್ (ಅಲಿಯಾಸ್ ರಾಜು) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಭೀಮನ ಅಮಾವಾಸ್ಯೆ ಪ್ರಯುಕ್ತ ಕೊಳ್ಳೇಗಾಲದ ಮಲೈಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಉಮೇಶ್ ಮತ್ತು ಸ್ನೇಹಿತರು ನಿನ್ನೆ ರಾತ್ರಿ ಹಿಂತಿರುಗಿ ಬರುತ್ತಿದ್ದಾಗ ರಾತ್ರಿ 1.30ರ ಸಮಯದಲ್ಲಿ ಮದ್ದೂರು-ಮಳವಳ್ಳಿ ರಸ್ತೆಯ ಸಿಎಪಿಸಿಎಂಎಸ್ ಗೋದಾಮು ಮುಂಭಾಗದ ಫುಟ್‍ಪಾತ್‍ನ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಈಅಪಘಾತ ಸಂಭವಿಸಿದೆ.
ಸುದ್ದಿ ತಿಳಿದ ತಕ್ಷಣ ಸಂಚಾರಿ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸಂತೋಷ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕೈಗೊಂಡಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ: ಚಲಿಸುತ್ತಿದ್ದ ಬೈಕ್‍ನಿಂದ ಆಯತಪ್ಪಿ ಕೆಳಗೆ ಬಿದ್ದು ಸವಾರ ಸಾವನ್ನಪ್ಪಿರುವ ಘಟನೆ ಬೆಳಕವಾಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮಳವಳ್ಳಿ ತಾಲ್ಲೂಕಿನ ವಾಸುಹಳ್ಳಿಯ ನಾಗೇಂದ್ರ(25) ಮೃತ ಸವಾರ.
ಬೆಳಕವಾಡಿಯಿಂದ ಕೆಲಸ ಮುಗಿಸಿ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಬೈಕ್‍ನಿಂದ ಆಯತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾನೆ. ಈ ಸಂಬಂಧ ಬೆಳಕವಾಡಿ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ