ಬೆಂಗಳೂರು, ಆ.11- ತೋಟದ ಮನೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದ ವೃದ್ಧೆಯೊಬ್ಬರನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಕೆಂಗೇರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.
ಮೈಸೂರು ರಸ್ತೆಯಲ್ಲಿನ ದುಬಾಸಿಪಾಳ್ಯ ಮತ್ತು ಮೈಲ್‍ಸಂದ್ರ ಮಧ್ಯೆ ಐರಾವತ ಹೋಟೆಲ್ ಪಕ್ಕದ ತೆಂಗಿನ ತೋಟದ ಒಂಟಿ ಮನೆಯಲ್ಲಿ ಗೌರಮ್ಮ (65) ಎಂಬವರು ಕೊಲೆಯಾಗಿದ್ದಾರೆ.
ಚಿಕ್ಕಪೇಟೆಯ ದೇವರಾಜ್ ಎಂಬವರಿಗೆ ಸೇರಿದ ಈ ತೋಟದ ಮನೆಯಲ್ಲಿ 40 ವರ್ಷಗಳಿಂದ ಗೌರಮ್ಮ ಮತ್ತು ಅವರ ಪತಿ ವಾಸಿಸುತ್ತಿದ್ದರು. ಪತಿಯ ನಿಧನದ ಬಳಿಕ ಕಳೆದ 15 ವರ್ಷಗಳಿಂದ ಅಜ್ಜಿ ಒಬ್ಬರೇ ಈ ಮನೆಯಲ್ಲಿ ವಾಸವಾಗಿದ್ದರು.
ಪರಿಚಯಸ್ಥ ಆಟೋ ಚಾಲಕರೊಬ್ಬರು ಹಾಗೂ ಬನಶಂಕರಿಯಲ್ಲಿರುವ ಅಜ್ಜಿಯ ಸಂಬಂಧಿಕರು ಆಗಾಗ ಬಂದು ಅವರ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು. ಆಟೋ ಚಾಲಕ ಅಜ್ಜಿಗೆ ಬೇಕಾದ ಆಹಾರ ಪದಾರ್ಥ ಮತ್ತು ಇನ್ನಿತರ ವಸ್ತುಗಳನ್ನು ತಂದು ಕೊಡುತ್ತಿದ್ದರು.
ಅಜ್ಜಿ ಹಸುವೊಂದನ್ನು ಸಾಕಿದ್ದರು. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಹಸು ನಿರಂತರವಾಗಿ ಅರಚಿಕೊಳ್ಳುತ್ತಿತ್ತು. ಈ ವೇಳೆ ಗೌರಮ್ಮ ಅವರು ಸಹ ಕಾಣಿಸಲಿಲ್ಲ. ಇದರಿಂದ ಅನುಮಾನಗೊಂಡ ಪಕ್ಕದ ಭದ್ರತಾ ಸಿಬ್ಬಂದಿ, ಅಜ್ಜಿಯ ಸಂಬಂಧಿಕರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ.
ಬನಶಂಕರಿಯಲ್ಲಿನ ಸಂಬಂಧಿಕರು ಮತ್ತು ಅಜ್ಜಿಯ ಪರಿಚಯಸ್ಥ ಆಟೋ ಚಾಲಕ ತಕ್ಷಣ ಮನೆಯ ಹತ್ತಿರ ಬಂದು ನೋಡಿದಾಗ ಮನೆಗೆ ಬೀಗ ಹಾಕಿತ್ತು. ನಂತರ ಕಿಟಕಿಯ ಮೂಲಕ ನೋಡಿದಾಗ ಗೌರಮ್ಮ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತು.
ತಕ್ಷಣ ಅವರು ಕೆಂಗೇರಿ ಪೆÇಲೀಸರಿಗೆ ವಿಷಯ ತಿಳಿಸಿದ್ದು, ಸುದ್ದಿ ತಿಳಿದು ಧಾವಿಸಿ ಬಂದ ಪೆÇಲೀಸರು ಮನೆಯ ಬೀಗ ಒಡೆದು ನೋಡಿದಾಗ ಅಜ್ಜಿ ಕೊಲೆಯಾಗಿರುವುದು ಗೊತ್ತಾಯಿತು.
ದುಷ್ಕರ್ಮಿಗಳು ಅಜ್ಜಿಯ ಕತ್ತು ಕೊಯ್ದು ಕೊಲೆ ಮಾಡಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಆದರೆ ಮೈಮೇಲೆ ಇದ್ದ ಚಿನ್ನಾಭರಣಗಳು ಹಾಗೆಯೇ ಇವೆ. ಕೊಲೆಗೆ ಕಾರಣ ಬಹಳ ನಿಗೂಢವಾಗಿದೆ. ಮೃತದೇಹವನ್ನು ಆರ್.ಆರ್.ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೆಂಗೇರಿ ಪೆÇಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.