ಮಿಲಿಟರಿಯಲ್ಲಿ ಕೆಲಸ ಕೊಡಿಸುವುದಾಗಿ ವಿದ್ಯಾವಂತ ನಿರುದ್ಯೋಗಿಗಳಿಂದ ವಂಚನೆ

 

ಬೆಂಗಳೂರು, ಆ.11-ಮಿಲಿಟರಿಯಲ್ಲಿ ಕೆಲಸ ಕೊಡಿಸುವುದಾಗಿ ವಿದ್ಯಾವಂತ ನಿರುದ್ಯೋಗಿಗಳಿಂದ ಹಣ ಪಡೆದು ವಂಚಿಸಿದ್ದ ಮಹಿಳೆ ಸೇರಿ ಇಬ್ಬರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ.
ಹೆಬ್ಬಾಳದ ನಾಗೇನಹಳ್ಳಿ ಮುಖ್ಯರಸ್ತೆ ನಿವಾಸಿ ಕೃಷ್ಣರಾಜನ್ (63) ಮತ್ತು ಕೆಜಿಎಫ್‍ನ ಚಾಂಪಿಯನ್‍ರೀಫ್ ಸುಜಾತಾ ಅಲಿಯಾಸ್ ಸೋಫಿಯಾ ಸುಜಾತಾ (42) ಬಂಧಿತ ಆರೋಪಿಗಳು.
ತಮಗೆ ಪರಿಚಯವಿರುವ ಹಲವಾರು ವಿದ್ಯಾವಂತ ನಿರುದ್ಯೋಗಿ ಹುಡುಗರಿಗೆ ಮಿಲಿಟರಿಯಲ್ಲಿ ಸೈನಿಕ, ಚಾಲಕ, ಗುಮಾಸ್ತ ಮತ್ತು ತಾಂತ್ರಿಕ ಹುದ್ದೆ ಕೊಡಿಸುವುದಾಗಿ ನಂಬಿಸಿ ಪ್ರತಿ ಅಭ್ಯರ್ಥಿ 2 ಲಕ್ಷ ರೂ. ಕೊಡಬೇಕೆಂದು ಹೇಳಿ ಮುಂಗಡವಾಗಿ 40 ಸಾವಿರ ರೂ. ಪಡೆದುಕೊಂಡು ನಕಲಿ ನೇಮಕಾತಿ ಪತ್ರ ನೀಡಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕೆಂದು ಊಟಿ, ಜಬ್ಬಲ್‍ಪುರ, ಇತರೆ ಪ್ರದೇಶಗಳಿಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿ ಇಬ್ಬರು ವ್ಯಕ್ತಿಗಳು ವಂಚನೆ ಮಾಡಿದ್ದಾರೆಂದು ದೀಪು ಶಂಕರ್ ಎಂಬುವವರು ಹೆಬ್ಬಾಳ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಹೆಬ್ಬಾಳ ಠಾಣೆ ಪೆÇಲೀಸರು ಇಬ್ಬರು ವಂಚಕರ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಮುಂದಿನ ತನಿಖೆಯ ಸಲುವಾಗಿ ಈ ಪ್ರಕರಣವನ್ನು ಸಿಸಿಬಿ ಘಟಕಕ್ಕೆ ವರ್ಗಾವಣೆ ಮಾಡಿದ್ದರು.
ಸಿಸಿಬಿ ಪೆÇಲೀಸರು ತನಿಖೆ ಕೈಗೊಂಡು ಸುಜಾತಾ ಎಂಬ ಮಹಿಳೆ ಹಾಗೂ ಹೆಬ್ಬಾಳದ ಕೃಷ್ಣರಾಜನ್ ಎಂಬುವವರನ್ನು ಬಂಧಿಸಿ ಮೊಬೈಲ್, ನಕಲಿ ಜಾಬ್‍ಕಾರ್ಡ್, ನಕಲಿ ನೇಮಕಾತಿ ಪತ್ರ, ವೈದ್ಯಕೀಯ ತಪಾಸಣೆ ಪತ್ರಗಳು ಸೇರಿದಂತೆ ವಿವಿಧ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ತಾವು ಮಿಲಿಟರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿ ಸುಮಾರು 20ಕ್ಕೂ ಹೆಚ್ಚು ನಿರುದ್ಯೋಗಿ ವಿದ್ಯಾವಂತ ಹುಡುಗರಿಗೆ ನಂಬಿಸಿ ವಂಚನೆ ಮಾಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಆರೋಪಿತೆ ಸುಜಾತಾ ಎಂಬಾಕೆ ಈ ಹಿಂದೆಯೂ ಕೂಡ ಹಲವು ಅಭ್ಯರ್ಥಿಗಳಿಂದ ಮಿಲಿಟರಿಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದುಕೊಂಡು ವಂಚಿಸಿದ್ದು, ಈ ಬಗ್ಗೆ ಹಲಸೂರು ಪೆÇಲೀಸ್ ಠಾಣೆಯಲ್ಲಿ 2013ನೆ ಸಾಲಿನಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಕಾರ್ಯ ಮುಂದುವರಿದಿದೆ. ಈ ಕಾರ್ಯಾಚರಣೆಯನ್ನು ಸಿಸಿಬಿ ವಿಶೇಷ ವಿಚಾರಣಾ ದಳದ ಎಸಿಪಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಮಲ್ಲಿಕಾರ್ಜುನ್ ಹಾಗೂ ಸಿಬ್ಬಂದಿ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ