ಮುಂದುವರೆದ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಆಯ್ಕೆಯ ಬಿಕ್ಕಟ್ಟು

 

ಬೆಂಗಳೂರು, ಆ.11- ರಾಜ್ಯ ಒಕ್ಕಲಿಗರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿದಿಲ್ಲ.
ಅಧ್ಯಕ್ಷರಾಗಿದ್ದ ಡಿ.ಎಂ.ಬೆಟ್ಟೇಗೌಡ ಹಾಗೂ ಸಂಘದ ಪದಾಧಿಕಾರಿಗಳನ್ನು ಅವಿಶ್ವಾಸ ನಿರ್ಣಯ ತರುವ ಮೂಲಕ ಪದಚ್ಯುತಗೊಳಿಸಲಾಗಿದೆ. ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಗೆ ಇನ್ನೂ ಮುಹೂರ್ತ ನಿಗದಿ ಮಾಡಿಲ್ಲ. ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನವನ್ನೇ ಎದುರು ನೋಡಲಾಗುತ್ತಿದೆ.

ಸಂಘದ ಹಲವು ನಿರ್ದೇಶಕರು ಉಭಯ ನಾಯಕರನ್ನು ಭೇಟಿ ಮಾಡಿ ನೂತನ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದ್ದರೂ ಕೂಡ ಅಂತಿಮ ತೀರ್ಮಾನವಾಗಿಲ್ಲ. ನಿನ್ನೆ ಸಂಜೆ ಕೆಲವು ನಿರ್ದೇಶಕರು ಗೌಡರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ಕೂಡ ನಡೆಸಿದ್ದಾರೆ.
ಸೋಮವಾರದವರೆಗೂ ಯಾವುದೇ ರೀತಿಯ ತೀರ್ಮಾನ ಆಗುವುದಿಲ್ಲ ಎಂದು ಸಂಘದ ನಿರ್ದೇಶಕರೊಬ್ಬರು ತಿಳಿಸಿದ್ದಾರೆ.
ಸಂಘದ ಬಹುತೇಕ ನಿರ್ದೇಶಕರು ದೇವೇಗೌಡರು ಮತ್ತು ಡಿ.ಕೆ.ಶಿವಕುಮಾರ್ ಸೂಚಿಸುವವರನ್ನು ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಡಾ.ಅಪ್ಪಾಜಿಗೌಡ ಅವರನ್ನು ಪದಚ್ಯುತಗೊಳಿಸಿದಾಗಲೂ ಇದೇ ಮಾರ್ಗವನ್ನು ಅನುಸರಿಸಿ ಡಿ.ಕೆ.ಶಿವಕುಮಾರ್ ಮತ್ತು ಗೌಡರ ನಿರ್ದೇಶನದಂತೆ ಬೆಟ್ಟೇಗೌಡರನ್ನು ಆಯ್ಕೆ ಮಾಡಿದ್ದರು.
ಸಂಘದ ಹೆಚ್ಚುವರಿ ಸಿಬ್ಬಂದಿ ನೇಮಕದ ವಿಚಾರದಲ್ಲಿ ನೌಕರರು ನಿರಂತರವಾಗಿ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಹಲವು ನಿರ್ದೇಶಕರು ಸಮಾಧಾನಗೊಂಡು ಸಂಘದ ಪದಾಧಿಕಾರಿಗಳನ್ನು ಪದಚ್ಯುತಗೊಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ