ಸಿಎಂ ನಾಟಿ ಮಾಡುವಂತಹ ಹಾಸ್ಯಾಸ್ಪದ ಕಾರ್ಯಕ್ರಮಗಳ ಬದಲು ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು: ಯಡಿಯೂರಪ್ಪ

 

ಬಳ್ಳಾರಿ,ಆ.11- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಭತ್ತ ನಾಟಿ ಮಾಡುವಂತಹ ಹಾಸ್ಯಾಸ್ಪದ ಕಾರ್ಯಕ್ರಮಗಳ ಬದಲು ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯ ಪ್ರವಾಸದ ಅಂಗವಾಗಿ ಬಳ್ಳಾರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ನಾಲ್ಕು ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿದ್ದೇನೆ. ಬಳ್ಳಾರಿಯಲ್ಲಿ ಇಂದು ಪ್ರವಾಸ ಆರಂಭಿಸುತ್ತಿದ್ದೇನೆ. ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಹಾಗೂ ಸಾಲ ಮನ್ನಾ ವಿಷಯದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಟೀಕಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 33ರಷ್ಟು ಮಳೆ ಕೊರತೆಯಾಗಿದ್ದು, 109 ಮಿ.ಮೀ.ಮಾತ್ರ ಮಳೆಯಾಗಿದೆ. 1.8 ಲಕ್ಷ ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 9 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು,ಅವರ ಕುಟುಂಬಕ್ಕೆ ಇದುವರೆಗೆ ಪರಿಹಾರ ವಿತರಿಸಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಕೊರತೆ ಉಂಟಾಗಿದೆ ಎಂದು ಯಡಿಯೂರಪ್ಪ ಆರೋಪಿಸಿದರು.
ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಶೋಚನೀಯವಾಗಿದೆ. ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ಹಾಗೂ ಸಾರ್ವಜನಿಕರು ಹತಾಶರಾಗಿದ್ದಾರೆ. ರೇಣುಕಾ ಎಂಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸರ್ಕಾರದ ಈ ಎಲ್ಲಾ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಅವರು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ಕಾದುನೋಡೋಣ ಎಂದು ಹೇಳಿದರು.

ವಿಧಾನಸಭೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಸಮಾಲೋಚನೆ ಸಭೆ ಮಾಡಿದ್ದೇವೆ. ಪ್ರವಾಸ ಮಾಡುವ ಕಡೆ ಎಲ್ಲಾ ಮಾಹಿತಿ ಸಂಗ್ರಹ ಮಾಡಿದ್ದೇವೆ. ಕಾರ್ಯಕರ್ತರದಲ್ಲಿ ಆತ್ಮವಿಶ್ವಾಸ ಮೂಡಿಸಿದ್ದೇವೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಇಡೀ ಜಗತ್ತೇ ಕೊಂಡಾಡಿದೆ. ಮತ್ತೊಮ್ಮೆ ಅವರು ಪ್ರಧಾನಿಯಾಗುವುದು ಖಚಿತ ಎಂದು ಹೇಳಿದ ಯಡಿಯೂರಪ್ಪ, ಶ್ರೀರಾಮುಲು ಅವರನ್ನು ನಾವೇ ರಾಜೀನಾಮೆ ಕೊಡಿಸಿ ಎರಡೂ ಕಡೆ ಚುನಾವಣೆಯ ಕಣಕ್ಕಿಳಿಸಿ ತಪ್ಪು ಮಾಡಿದೆವು, ಬಾದಾಮಿಯಲ್ಲಿ ಮಾತ್ರ ಸ್ಪರ್ಧೆ ಮಾಡಿಸಬೇಕಿತ್ತು. ಪಕ್ಷದ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜಯಗಳಿಸುತ್ತೇವೆ. ನಾನು ಯಾರ ಬಗ್ಗೆಯೂ ಮೃದುಧೋರಣೆ ಅನುಸರಿಸುವುದಿಲ್ಲ. ಡಿ.ಕೆ.ಶಿವಕುಮಾರ ಅವರ ಬಗ್ಗೆಯೂ ಮೃದು ಧೋರಣೆ ಇಲ್ಲ. ಯಾವ ಕಾಂಗ್ರೆಸ್ ಶಾಸಕರ ಜೊತೆಯೂ ಸಂಪರ್ಕವಿಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ಕೂಗು ಇಲ್ಲ, ಕರ್ನಾಟಕವನ್ನು ಒಡೆಯಲು ಬಿಡುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ