ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ- ಭೀಕರ ಜಲಪ್ರವಾಹಕ್ಕೆ ಕೇರಳದಲ್ಲಿ 26 ಮಂದಿ ಮರಣ

ಬೆಂಗಳೂರು/ತಿರುವನಂತಪುರಂ: ಕರ್ನಾಟಕ ಮತ್ತು ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗ್ತಿದ್ದು, ಇನ್ನು ಮೂರು ದಿನ ಇದೇ ಪರಿಸ್ಥಿತಿ ಮುಂದುವರಿಯಲಿದೆ.

ಈಗಾಗಲೇ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿವೆ. ಕಬಿನಿ ಜಲಾಶಯದಲ್ಲಿ ನೀರಿನ ಒಳಹರಿವು ಅಧಿಕವಾಗಿದ್ದು, ಸದ್ಯ 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗ್ತಿದೆ. ಹೊರ ಹರಿವು 1 ಲಕ್ಷ ಕ್ಯೂಸೆಕ್ ದಾಟುವ ಸಾಧ್ಯತೆ ಇದ್ದು, ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಇದೇ ಮೊದಲ ಬಾರಿ ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಯಾಗ್ತಿರೋದು. ಇತ್ತ, ತುಂಗಾ, ಭದ್ರಾ ನದಿಗಳು ಪ್ರವಾಹದ ಮಟ್ಟ ಮೀರಿ ಹರಿಯುತ್ತಿರೋದ್ರಿಂದ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ಪ್ರವಾಸಿಗರು ನದಿ ತೀರದ ಪ್ರದೇಶಗಳಿಗೆ ಹೋಗಬಾರದೆಂದು ಚಿಕ್ಕಮಗಳೂರು ಪೊಲೀಸರು ಮನವಿ ಮಾಡಿದ್ದಾರೆ.

ಕೇರಳದಲ್ಲಿನ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆ ಆಗಿದ್ದು, ಜನಜೀವನ ಅಕ್ಷರಶಃ ನರಕವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆರು ತಂಡಗಳನ್ನು ನಿಯೋಜಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. ನಾಲ್ಕು ಹೆಚ್ಚುವರಿ ತಂಡಗಳನ್ನು ಕೋಝಿಕೋಡು ಬಳಿ ನಿಯೋಜಿಸಲಾಗಿದ್ದು, ದೆಹಲಿಯಲ್ಲಿರುವ ಎನ್‍ಡಿಆರ್‍ಎಫ್ ಸಹಾಯವಾಣಿ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿವೆ.

26 ವರ್ಷಗಳ ಬಳಿಕ ಇಡುಕಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡ್ತಿರೋದ್ರಿಂದ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು ಪ್ರವಾಹ ಪರಿಸ್ಥಿತಿ ಬಗ್ಗೆ ಕೇರಳ ಸಿಎಂ ಪಿಣರಾಯ್ ವಿಜಯನ್ ಬಳಿ ಮಾಹಿತಿ ಪಡೆದ ಪ್ರಧಾನಿ ಮೋದಿ ಎಲ್ಲಾ ಅಗತ್ಯ ನೆರವು ಒದಗಿಸುವುದಾಗಿ ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ಕೂಡ ಕೇರಳದ ನೆರವಿಗೆ ಧಾವಿಸಿದ್ದು, 10 ಕೋಟಿ ರೂ. ಮೌಲ್ಯದ ಪರಿಹಾರ ಸಾಮಗ್ರಿ ರವಾನೆ ಮಾಡಲು ಹಾಗೂ ವೈದ್ಯರ ತಂಡ ಕಳುಹಿಸಿ ಕೊಡಲು ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ