ಬೆಂಗಳೂರು, ಆ.10- ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಇಂದು ಸಂಜೆ ಜೆಡಿಎಸ್ ಮಹತ್ವದ ಸಭೆ ನಡೆಸಲಿದೆ.
ನಗರದಲ್ಲಿರುವ ಜೆ.ಪಿ.ಭವನದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಪಕ್ಷ ಪ್ರತಿನಿಧಿಸುವ ಸಚಿವರು, ವಿಧಾನಸಭೆ ಹಾಗೂ ವಿಧಾನಪರಿಷತ್ನ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಅನುಕೂಲವಾಗುವಂತೆ ಕಾರ್ಯತಂತ್ರವನ್ನು ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಚುನಾವಣೆಯಲ್ಲಿ ಹೆಚ್ಚು ಶ್ರಮವಹಿಸಿ ಕಾರ್ಯನಿರ್ವಹಿಸುವಂತೆ ಸಚಿವರು ಹಾಗೂ ಶಾಸಕರಿಗೆ ಸೂಚನೆ ನೀಡಲಾಗುತ್ತದೆ.
ಚುನಾವಣೆಯ ಜವಾಬ್ದಾರಿಯನ್ನು ಸಚಿವರು, ಶಾಸಕರಿಬ್ಬರಿಗೂ ಹಂಚಿಕೆ ಮಾಡಲಾಗುತ್ತದೆ. ಅಲ್ಲದೆ, ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಗಂಭೀರ ಚರ್ಚೆ ನಡೆಯಲಿದೆ. ಆಯಾ ಜಿಲ್ಲೆ ಮುಖಂಡರು, ಸಚಿವರು, ಶಾಸಕರಿಗೆ ಚುನಾವಣೆಯ ಜವಾಬ್ದಾರಿ ನೀಡುವ ಸಾಧ್ಯತೆಗಳಿವೆ.
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೂರು ರೀತಿಯ ವರ್ಗೀಕರಣ ಮಾಡಲಾಗಿದ್ದು, ಎ ವರ್ಗದಲ್ಲಿ ಬರುವ ಸಂಸ್ಥೆಗಳಲ್ಲಿ ಜೆಡಿಎಸ್ ಗೆಲುವಿನ ಸಾಧ್ಯತೆ ಹೆಚ್ಚಾಗಿರುತ್ತದೆ. ಬಿ.ವರ್ಗದಲ್ಲಿ ಬರುವಂತ ಸಂಸ್ಥೆಗಳಲ್ಲಿ ಗೆಲ್ಲಲು ಹೆಚ್ಚಿನ ಶ್ರಮ ವಹಿಸಬೇಕಾಗಿರುತ್ತದೆ.
ಸಿ ವರ್ಗದಲ್ಲಿ ಬರುವ ಸಂಸ್ಥೆಗಳಲ್ಲಿ ಹೆಚ್ಚಿನ ಶ್ರಮ ವಹಿಸಿ ಪೈಪೆÇೀಟಿ ನೀಡಬೇಕಾಗುತ್ತದೆ. ಎ ಮತ್ತು ಬಿ ವರ್ಗದಲ್ಲಿ ಬರುವಂತಹ ಸಂಸ್ಥೆಗಳು ಹಳೇ ಮೈಸೂರು ಭಾಗಕ್ಕೆ ಸೇರಿದವಾಗಿವೆ. ಇನ್ನು ಸಿ ವರ್ಗದಲ್ಲಿ ಬರುವ ಸಂಸ್ಥೆಗಳು ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೆ ಸೇರಿರುತ್ತವೆ.
ಈ ರೀತಿ ವರ್ಗೀಕರಿಸಲಾದ ಸಂಸ್ಥೆಗಳಲ್ಲಿ ಚುನಾವಣೆಯನ್ನು ಹೇಗೆ ಎದುರಿಸಬೇಕೆಂಬ ಬಗ್ಗೆ ದೇವೇಗೌಡರು ಮಾರ್ಗದರ್ಶನ ಮಾಡಿ ಜವಾಬ್ದಾರಿಯನ್ನು ಹಂಚಿಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.