
ಹುಬ್ಬಳ್ಳಿ- ದೇಶದಲ್ಲಿಯೇ ವಿಶಿಷ್ಟ ಮತ್ತು ವಿಭಿನ್ನವಾದ ನ್ಯಾಯಾಲಯ ಸಂಕೀರ್ಣ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿದೆ. ಹಲವು ವಿಶೇಷತೆಗಳನ್ನು ಹೊಂದಿರುವ ಈ ಕೋರ್ಟ್ ಉದ್ಘಾಟನೆಗೆ ಸಜ್ಜಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ನ್ಯಾಯಾಲಯದ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಅಂದಹಾಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿರ್ಮಿಸಲಾಗಿರುವ ನ್ಯಾಯಾಲಯ ಸಂಕೀರ್ಣ ದೇಶದ ಗಮನಸೆಳೆಯುತ್ತಿದೆ. ವಿದ್ಯಾನಗರದ ತಿಮ್ಮಸಾಗರದಲ್ಲಿ ಐದು ಎಕರೆ ಹದಿನೈದು ಗುಂಟೆ ಜಾಗದಲ್ಲಿ ಕಟ್ಟಡ ತಲೆಯೆತ್ತಿದೆ. ಒಟ್ಟು ಏಳು ಮಹಡಿಗಳನ್ನು ಹೊಂದಿರುವ ಕಟ್ಟಡ ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಹೊಂದಿದೆ. ದೇಶದಲ್ಲಿ ಮಾತ್ರವಲ್ಲ ಏಷಿಯಾದಲ್ಲಿಯೇ ಇದೊಂದು ವಿಶಿಷ್ಟ ಕೋರ್ಟ್ ಎಂದು ಹೆಸರಿಗೆ ಪಾತ್ರವಾಗಿದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಾಗೂ ಸುಸಜ್ಜಿತವಾಗಿ ತಾಲ್ಲೂಕಾ ಕೇಂದ್ರದಲ್ಲಿ ನಿರ್ಮಿಸಲಾಗಿರುವ ಏಕೈಕ ಕಟ್ಟಡ ಎನ್ನುವ ಹೆಗ್ಗಳಿಕೆಗೂ ಹುಬ್ಬಳ್ಳಿಯ ನ್ಯಾಯಾಲಯ ಸಂಕೀರ್ಣ ಪಾತ್ರವಾಗಿದೆ.
ಕೋರ್ಟ್ ಹಾಲ್ನಲ್ಲಿ ವಾದ- ಪ್ರತಿವಾದಿ ಹಾಗೂ ಸರಕಾರಿ ವಕೀಲರಿಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ನ್ಯಾಯಾಧೀಶರ ಧ್ವನಿ ಕೇಳಿಸಲು ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅಳವಡಿಸಲಾಗಿದೆ. ಇಡೀ ಸಂಕೀರ್ಣಕ್ಕೆ ಸಿಸಿಟಿವಿ ಕ್ಯಾಮರಾಗಳ ಕಣ್ಗಾವಲು ಇರಲಿದೆ. ಪ್ರತಿ ಮಹಡಿಯಲ್ಲಿ ನಾಲ್ಕು ನ್ಯಾಯಾಲಯ ಕಲಾಪದ ಸಭಾಂಗಣಗಳಿವೆ. ಲಾಕಪ್ ಕೊಠಡಿ ಮತ್ತು ಕಕ್ಷಿದಾರರಿಗೆ ವಿಶ್ರಾಂತಿ ಕೊಠಡಿಗಳಿವೆ. ಒಂದು ಸಾವಿರ ವಾಹನ ನಿಲುಗಡೆ ವ್ಯವಸ್ಥೆ, ಕ್ಯಾಂಟೀನ್ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆಯಿದೆ. ಮಹಿಳೆಯರ ಅನುಕೂಲಕ್ಕಾಗಿ ಮಗುವಿಗೆ ಹಾಲುಣಿಸುವ ಕೊಠಡಿಯನ್ನು ನಿರ್ಮಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಸುಮಾರು 120 ಕೋಟಿ ರೂಪಾಯಿ ವೆಚ್ಚದಲ್ಲಿ ಕೋರ್ಟ್ ಸಂಕೀರ್ಣ ನಿರ್ಮಿಸಲಾವಾಗಿದೆ. ಸದ್ಯ 17 ವಿವಿಧ ಹಂತದ ನ್ಯಾಯಾಲಯಗಳು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿವೆ.
ಆಗಸ್ಟ್12 ರಂದು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಕೋರ್ಟ್ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಸೇರಿದಂತೆ 30ನ್ಯಾಯಾಧೀಶರು ಹಾಗೂ ಸಿಎಮ್ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.