ತಮ್ಮ ವಿರುದ್ಧ ಪಕ್ಷದಲ್ಲಿ ನಡೆಯುತ್ತಿರುವ ಷಡ್ಯಂತ್ರ ಹತ್ತಿಕ್ಕಲು ಯಡಿಯೂರಪ್ಪ ತಂತ್ರ

 

ಬೆಂಗಳೂರು, ಆ.10- ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮ ವಿರುದ್ಧ ಪಕ್ಷದಲ್ಲಿ ನಡೆಯುತ್ತಿರುವ ಷಡ್ಯಂತ್ರಗಳನ್ನು ಹತ್ತಿಕ್ಕಲು ಮುಂದಾಗಿದ್ದಾರೆ.
ತಮ್ಮ ವಿರುದ್ಧ ಪಕ್ಷದಲ್ಲಿ ಕತ್ತಿ ಮಸೆಯುತ್ತಿರುವವರನ್ನು ಬಗ್ಗು ಬಡಿಯಲು ಕಾರ್ಯತಂತ್ರ ರೂಪಿಸಿರುವ ಯಡಿಯೂರಪ್ಪ, ಬಿಜೆಪಿ ನಾಯಕರು ಮೂರು ತಂಡಗಳಲ್ಲಿ ಆರಂಭಿಸಿರುವ ಪ್ರವಾಸ ಸಂದರ್ಭದಲ್ಲಿ ವಿರೋಧಿಗಳ ಬಗ್ಗೆ ಮಾಹಿತಿ ಪಡೆಯಲು ತಮ್ಮದೇ ಆದ ಗುಪ್ತದಳವನ್ನು ರಚಿಸಿದ್ದಾರೆ.
ಪ್ರತಿಯೊಂದು ತಂಡದಲ್ಲಿ, ಪ್ರವಾಸ ಮಾಡುವ ಸ್ಥಳಗಳಲ್ಲಿ ತಮ್ಮ ವಿರುದ್ಧ ಇರುವ ಗುಂಪಿನ ಚಲನವಲನಗಳ ಬಗ್ಗೆ ಮಾಹಿತಿ ತರಿಸಿಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ವೇಳೆ ತಮ್ಮವರೇ ತಮಗೆ ಮುಳ್ಳಾಗಬಾರದು ಎಂಬ ಕಾರಣದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಸ್ವಪಕ್ಷೀಯ ಷಡ್ಯಂತ್ರ ತಡೆಯಲು ಮಾಸ್ಟರ್ ಪ್ಲ್ಯಾನ್ ರೂಪಿಸಿರುವ ಯಡಿಯೂರಪ್ಪ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ನಿನ್ನೆಯಿಂದ ರಾಜ್ಯಾದ್ಯಂತ ಬಿಜೆಪಿ ಮುಖಂಡರು ಪ್ರವಾಸ ಆರಂಭಿಸಿದ್ದಾರೆ. ಅದಕ್ಕಾಗಿ ಬಿಜೆಪಿ ಹಿರಿಯ ನಾಯಕರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಹೀಗೆ ರಚಿಸಲಾಗಿರುವ ಪ್ರತಿ ತಂಡದಲ್ಲೂ ತಮ್ಮ ಆಪ್ತರೊಬ್ಬರನ್ನು ಯಡಿಯೂರಪ್ಪ ನೇಮಕ ಮಾಡಿದ್ದಾರೆ.
ಆಪ್ತರಿಗೇ ಪ್ರಾಧಾನ್ಯತೆ ನೀಡಿ ರಾಜ್ಯ ಪ್ರವಾಸದ ತಂಡಗಳನ್ನು ರಚಿಸಿರುವ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ನೇತೃತ್ವದ ತಂಡದಲ್ಲಿ ತಮ್ಮ ಆಪ್ತರಾದ ಅರವಿಂದ ಲಿಂಬಾವಳಿ ಅವರನ್ನು ಬಿಟ್ಟಿದ್ದಾರೆ. ಈಶ್ವರಪ್ಪನವರ ತಂಡದಲ್ಲಿ ಲಕ್ಷ್ಮಣ ಸವದಿ ಅವರನ್ನು ಸೇರಿಸಿದ್ದಾರೆ. ಹೀಗೆ ಪ್ರತಿಯೊಂದು ಹಂತದಲ್ಲೂ ತಮ್ಮ ಎದುರಾಳಿಗಳನ್ನು ಹತ್ತಿಕ್ಕಲು ಕಾರ್ಯಪ್ರವೃತ್ತರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ