ಬೆಂಗಳೂರು, ಆ.10- ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಯ 10 ಜಾಗಗಳನ್ನು ಸರ್ಕಾರಕ್ಕೆ ನೀಡಿದ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿಯಲ್ಲಿರುವ ಗೋಮಾಳದ 207.2 ಎಕರೆ ಜಾಗವನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸಲು ಬಿಬಿಎಂಪಿ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ಇಂದು ಬೆಳಗ್ಗೆ ಮೇಯರ್ ಸಂಪತ್ರಾಜ್, ಆಯುಕ್ತರಾದ ಮಂಜುನಾಥ ಪ್ರಸಾದ್, ಜಿಲ್ಲಾಧಿಕಾರಿ ವಿಜಯ್ಶಂಕರ್, ಎಸಿಎಸ್ ಮಹೇಂದ್ರ ಜೈನ್ ಮುಂತಾದವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ತಮ್ಮನಾಯಕನಹಳ್ಳಿಯ ಸರ್ವೆ ನಂ.23ರಲ್ಲಿರುವ ಜಮೀನನ್ನು ರಕ್ಷಣಾ ಇಲಾಖೆಗೆ ನೀಡಲು ಸಹಮತ ವ್ಯಕ್ತಪಡಿಸಿದರು.
ಈ ಮೊದಲು ಈ ಜಾಗವನ್ನು ಬಿಬಿಎಂಪಿ ಕಸ ವಿಲೇವಾರಿಗೆಂದು ಗುರುತಿಸಿತ್ತು. ಸ್ಥಳೀಯರು ಹಾಗೂ ಬನ್ನೇರುಘಟ್ಟ ಅಭಯಾರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಈಗ ಈ ಜಾಗವನ್ನು ಸೇನೆಗೆ ಒಪ್ಪಿಸಲು ಬಿಬಿಎಂಪಿ ಮುಂದಾಗಿದೆ.
ಸ್ಥಳೀಯ ರೈತರು ಇದೇ ಗೋಮಾಳದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಇಂದು ಸೇನೆಗೆ ಈ ಜಾಗವನ್ನು ವಹಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಯುತ್ತಿದ್ದಂತೆ ಅಲ್ಲಿಗೆ ಬಂದ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ದನಕರುಗಳಿಗೆ, ಕೃಷಿ ಚಟುವಟಿಕೆಗಳಿಗೆ ಇರುವುದು ಇದೇ ಜಾಗ. ಇದನ್ನು ಮಿಲಿಟರಿಯವರಿಗೆ ನೀಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಜಾಗವನ್ನು ಮಿಲಿಟರಿಗೆ ನೀಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.