ನವದೆಹಲಿ: 2019ರ ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅತಿಥಿಯಾಗಿ ಭಾರತಕ್ಕೆ ಆಗಮಿಸುವುದಷ್ಟೇ ಅಲ್ಲ. ಈ ಸಂದರ್ಭದಲ್ಲಿ ಅವರೊಂದಿಗೆ ಇನ್ನೂ ಹಲವು ಮಾತುಕತೆಗಳೂ ನಡೆಯಲಿವೆ ಎಂದು ಹೇಳಲಾಗ್ತಿದೆ.
ಆದ್ರೆ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ದಿನ, ಸಂದರ್ಭ ಇನ್ನೂ ನಿರ್ಧಾರವಾಗಿಲ್ಲ ಎಂಬ ಅಧಿಕೃತ ಮಾಹಿತಿಯೂ ತಿಳಿದುಬಂದಿದೆ. ಭಾರತದ ಗಣರಾಜ್ಯೋತ್ಸವಕ್ಕೆಂದೇ ಟ್ರಂಪ್ ಅವರನ್ನು ಆಹ್ವಾನಿಸುವತ್ತ ಯೋಚಿಸದೆ, ಇತರೆ ಅವಕಾಶಗಳ ಬಗ್ಗೆಯೂ ಚಿಂತನೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅವರು ಭಾರತಕ್ಕೆ ಭೇಟಿ ನೀಡಲು ಗಣರಾಜ್ಯೋತ್ಸವ ಸಂದರ್ಭವೂ ಒಂದು ಆಯ್ಕೆಯಾಗಿದೆ ಎನ್ನಲಾಗಿದೆ.
ಕಳೆದ ವಾರ ಅಮೆರಿಕದ ವೈಟ್ಹೌಸ್ನ ಮಾಧ್ಯಮ ಕಾರ್ಯದರ್ಶಿ ಸರಹ್ ಸ್ಯಾಂಡರ್ಸ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, ಟ್ರಂಪ್ ಅವರು ಭಾರತದ ಆಹ್ವಾನವನ್ನು ಸ್ವೀಕರಿಸಿದ್ದು, ಭೇಟಿ ನೀಡುವ ಸಂಬಂಧ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿದ್ದರು. ಕಳೆದ ವರ್ಷ ವಾಷಿಂಗ್ಟನ್ನಲ್ಲಿ ನಡೆದಿದ್ದ ಚರ್ಚೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು. ಇದು ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಗೆ ಹಾಗೂ ಹಲವು ಮಹತ್ವದ ಮಾತುಕತೆಗೆ ಸಹಕಾರಿಯಾಗಲಿ ಎಂದು ವಿಶ್ಲೇಷಿಸಲಾಗಿತ್ತು.
ಪ್ರತಿವರ್ಷ ಗಣರಾಜ್ಯೋತ್ಸವದಂದು ವಿಶ್ವದ ನಾಯಕರನ್ನು ಆಹ್ವಾನಿಸುವುದು ಸಂಪ್ರದಾಯ. ಈಗಾಗಲೇ ಅಮೆರಿಕದ ಅಧ್ಯಕ್ಷರಾಗಿದ್ದ ವೇಳೆ ಬರಾಕ್ ಒಬಾಮಾ, ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೋಲ್ಯಾಂಡ್, ಜಪಾನ್ ಪ್ರಧಾನಿ ಶಿಂಜೊ ಅಬೆ ಹಾಗೂ ಪ್ರಸಕ್ತ ವರ್ಷ ಏಷ್ಯಾದ 10 ಮಂದಿ ನಾಯಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದು ಸ್ಮರಣಿಯ.