ನವದೆಹಲಿ:ಆ-10: ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಗೆ ಒಮ್ಮತ ಮೂಡದ ಹಿನ್ನಲೆಯಲ್ಲಿ ರಾಜ್ಯಸಭೆಯಲ್ಲಿ ಅಂಗೀಕರಿಸುವುದಿಲ್ಲ ಎಂದು ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ತಿಳಿಸಿದ್ದಾರೆ. ಈ ಮೂಲಕ ಲೋಕಸಭೆಯಲ್ಲಿ ಅಂಗೀಕಾರವಾಗಿರುವ ತ್ರಿವಳಿ ತಲಾಖ್ ಮಸೂದೆ ಈ ಬಾರಿ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಸುಳ್ಳಾಗಿದೆ.
ಮುಂಗಾರು ಅಧಿವೇಶನದ ಕೊನೆಯ ದಿನ ಮಾತನಾಡಿದ ವೆಂಕಯ್ಯ ನಾಯ್ಡು, ಮಸೂದೆ ಅಂಗೀಕಾರಕ್ಕಾಗಿ ಚಳಿಗಾಲದ ಅಧಿವೇಶನದವರೆಗೆ ಕಾಯಬೇಕು ಎಂದರು.
ವಿರೋಧ ಪಕ್ಷಗಳು ಇರಿಸಿದ್ದ ಬೇಡಿಕೆಗಳಿಗೆ ಸಹಮತ ಸೂಚಿಸಿರುವ ಕೇಂದ್ರ ಸರ್ಕಾರ ಗುರುವಾರ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಸೂಚಿಸಿತ್ತು. ತಲಾಖ್ ನೀಡುವ ವ್ಯಕ್ತಿಯು ವಿಚಾರಣೆ ಆರಂಭವಾಗುವ ವರೆಗೆ ಜಾಮೀನು ಪಡೆಯಬಹುದಾದ ಅವಕಾಶವನ್ನು ನೀಡಬೇಕು. ಸಂತ್ರಸ್ತೆಯ ಹತ್ತಿರದ ಸಂಬಂಧಿಕರು ಆಕೆಯ ಪರವಾಗಿ ದೂರು ನೀಡಲು ಅವಕಾಶ ಇರಬೇಕು ಮತ್ತು ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಮ್ಯಾಜಿಸ್ಟ್ರೇಟ್ ಕೋರ್ಟ್ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡಿ ಮಸೂದೆಗೆ ತಿದ್ದುಪಡಿ ತರಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ ಹಿನ್ನಲೆಯಲ್ಲಿ ಕೆಲ ಬದಲಾವಣೆಗಳಿಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿತ್ತು.
ಈ ಹಿನ್ನಲೆಯಲ್ಲಿ ತಿದ್ದುಪಡಿ ಮಸೂದೆ ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಬೇಕಿತ್ತು. ಆದರೆ ಮಂಡನೆಯಾಗದೆ ಚಳಿಗಾಲದ ಅಧಿವೇಶನಕ್ಕೆ ಮುಂದೂಡಿಕೆಯಾಗಿದೆ.
ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದು, ಅದನ್ನು ಕಾನೂನಾತ್ಮಕವಾಗಿ ಸಂಪೂರ್ಣ ತೆಗೆದು ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಯನ್ನು ಕಳೆದ ಡಿಸೆಂಬರ್ ನಲ್ಲಿ ಲೋಕಸಭೆಯಲ್ಲಿ ಅಂಗೀಕರಿಸಿದೆ. ಆದರೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು ಮತ್ತು ತಿದ್ದುಪಡಿಗೆ ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ತ್ರಿವಳಿ ತಲಾಖ್ ಜಾಮೀನು ರಹಿತವಾಗಿದ್ದರೂ ಮ್ಯಾಜಿಸ್ಟ್ರೇಟ್ ರಿಂದ ಜಾಮೀನು ಪಡೆಯಲು ತಿದ್ದುಪಡಿ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.
Triple talaq bill, not to be taken up in this Rajya Sabha session