ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

 

ಬೆಂಗಳೂರು, ಆ.9-ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ತಮ್ಮ ಸ್ವಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ತೆರಳುವ ಮುನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರ ಜಿಲ್ಲಾ ಮಟ್ಟದ ನಾಯಕರಿಗೆ ಬಿಟ್ಟಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯಾ ಪರಿಸ್ಥಿತಿಗನುಗುಣವಾಗಿ ಜಿಲ್ಲಾ ಮಟ್ಟದ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ. ಲೋಕಸಭೆ ಮೈತ್ರಿ ವಿಚಾರ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಸ್ಥಳೀಯವಾಗಿ ಏನೇನು ಮತ್ತು ಯಾವ ರೀತಿಯ ಹೊಂದಾಣಿಕೆ ಮಾಡಿಕೊಂಡರೆ ಸುಲಭ ಮತ್ತು ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬ ಕುರಿತು ಜಿಲ್ಲಾ ಮಟ್ಟದ ನಾಯಕರಿಗೆ ಜವಾಬ್ದಾರಿ ವಹಿಸಲಾಗಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಆಗುತ್ತದೆ. ಆವಾಗ ನೋಡೋಣ ಎಂದರು.
ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮನ್ವಯತೆಯಿಂದ ಇರಬೇಕು. ಹಾಗಾಗಿ ಕೆಲವೊಂದು ಹೊಂದಾಣಿಕೆ ಅನಿವಾರ್ಯ ಎಂದು ತಿಳಿಸಿದರು.
ಶಾಸಕ ಪ್ರಸಾದ್ ಅಬ್ಬಯ್ಯ, ಮೋಹನ್ ಹೊಸಮನಿ, ಸದಾನಂದ ಡಂಗಣ್ಣನವರ್, ಶರಣಪ್ಪ ಕೋಟಗಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ