ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಬಗ್ಗೆ ನಾಳೆ ಸಂಜೆ ಅಂತಿಮ ನಿರ್ಧಾರ

 

ಬೆಂಗಳೂರು,ಆ.9- ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಬಗ್ಗೆ ನಾಳೆ ಸಂಜೆ ಅಂತಿಮ ನಿರ್ಧಾರವಾಗುವ ಸಾಧ್ಯತೆಗಳಿವೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಸೂಚಿಸುವವರನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಲು ಸಂಘದ ಬಹುತೇಕ ನಿರ್ದೇಶಕರು ನಿರ್ಧರಿಸಿದ್ದಾರೆ.
ಹೀಗಾಗಿ ನಾಳೆ ಸಂಜೆ ಉಭಯ ನಾಯಕರನ್ನು ಸಂಘದ ನಿರ್ದೇಶಕರು ಭೇಟಿ ಮಾಡಲಿದ್ದಾರೆ. ಗೌಡರು ಮತ್ತು ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಕುರಿತಂತೆ ಸಮಾಲೋಚನೆ ನಡೆಸಲಾಗುತ್ತದೆ.
ಉಭಯ ನಾಯಕರು ನೀಡುವ ನಿರ್ದೇಶನವನ್ನು ಪಾಲಿಸಲು ನಿರ್ದೇಶಕರು ಸಿದ್ಧರಾಗಿದ್ದಾರೆ. ಸಂಘದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ಉಂಟಾಗಿ ಅಧ್ಯಕ್ಷರಾಗಿದ್ದ ಬೆಟ್ಟೇಗೌಡ ಮತ್ತು ಪದಾಧಿಕಾರಿಗಳನ್ನು ಪದಚ್ಯುತಿಗೊಳಿಸಲಾಗಿದೆ.
ಹೆಚ್ಚುವರಿ ಸಿಬ್ಬಂದಿ ನೇಮಕ ರದ್ದುಪಡಿಸುವಂತೆ ಸಂಘದ ನೌಕರರು ನಿರಂತರವಾಗಿ ಧರಣಿಯನ್ನು ನಡೆಸಿದ್ದರು. ಡಾ.ಅಪ್ಪಾಜಿಗೌಡ ಅಧ್ಯಕ್ಷರಾಗಿದ್ದಾಗಲೂ ಇದೇ ರೀತಿ ಅಸಮಾಧಾನಗೊಂಡು ಹಲವು ಆರೋಪಗಳನ್ನು ಹೊರೆಸಿ ಪದಚ್ಯುತಿಗೊಳಿಸಲಾಗಿತ್ತು.
ಆಗ ದೇವೇಗೌಡರು ಮತ್ತು ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಸಭೆ ನಡೆಸಿ ಬೆಟ್ಟೇಗೌಡರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು.
ಈಗ ಮತ್ತೆ ಅದೇ ಮಾರ್ಗವನ್ನು ನಿರ್ದೇಶಕರು ಅನುಸರಿಸುತ್ತಿದ್ದಾರೆ. ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಡಾ.ಅಪ್ಪಾಜಿಗೌಡ, ಡಾ.ಶಿವಲಿಂಗಯ್ಯ, ಯಲುವಳ್ಳಿ ಎನ್.ರಮೇಶ್ ಮತ್ತಿತರರ ಹೆಸರುಗಳು ಕೇಳಿಬರುತ್ತಿವೆ.
ನಾಳೆ ಸಂಜೆ ಸಭೆ ನಡೆದ ಬಳಿಕ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ನೂತನ ಪದಾಧಿಕಾರಿಗಳು ಯಾರಾಗಬೇಕೆಂಬ ಬಗ್ಗೆ ಸ್ಪಷ್ಟವಾಗಲಿದೆ.
ಡಿಸೆಂಬರ್- ಜನವರಿ ವೇಳೆಗೆ ಸಂಘದ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಬೇಕಿದ್ದು, ನೂತನ ಪದಾಧಿಕಾರಿಗಳ ಆಯ್ಕೆಯನ್ನು ಜನಾಂಗದ ನಿರ್ದೇಶನದ ಮೇರೆಗೆ ಆಯ್ಕೆ ಮಾಡಿಕೊಳ್ಳುವ ನಿರ್ಧಾರಕ್ಕೆ ನಿರ್ದೇಶಕರು ಬಂದಿದ್ದಾರೆ.
ನೂತನ ಪದಾಧಿಕಾರಿಗಳು ಯಾರಾಗಲಿದ್ದಾರೆ ಎಂಬ ಕುತೂಹಲ ಒಕ್ಕಲಿಗ ಸಮುದಾಯದಲ್ಲಿ ಮೂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ