ಹೊಸದಿಲ್ಲಿ : ದೇಶೀಯ ಜವಳಿ ಹಾಗೂ ಗಾರ್ಮೆಂಟ್ಸ್ ವಲಯಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರಕಾರ, 501 ಜವಳಿ ಮತ್ತು ಅಪಾರಲ್ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ.20ಕ್ಕೆ ಹೆಚ್ಚಳ ಮಾಡಿದೆ.
ಆಮದು ಸುಂಕ ಹೆಚ್ಚಳ ಮಾಡುವಂತೆ ಜವಳಿ ಇಲಾಖೆಯು ಪ್ರಸ್ತಾಪವನ್ನು ಸಲ್ಲಿಸಿತ್ತು. ಇದನ್ನು ಪರಿಗಣಿಸಿದ ಕೇಂದ್ರ ಸರಕಾರ, ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಜವಳಿ ಸಚಿವೆ ಸ್ಮೃತಿ ಇರಾನಿ, ಈ ನಿರ್ಧಾರದಿಂದ ದೇಶೀಯ ಜವಳಿ ಉತ್ಪಾದಕರಿಗೆ ನಿರಾಳವಾಗಲಿದ್ದು, ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದೆ ಎಂದಿದ್ದಾರೆ.
ಹಣಕಾಸು ಖಾತೆ ಸಹಾಯಕ ಸಚಿವ ರಾಧ್ಕಾೃಷ್ಣನ್ ಅವರು ಲೋಕಸಭೆಯಲ್ಲಿ ಈ ಸಂಬಂಧ ಅಧಿಸೂಚನೆಯನ್ನು ಮಂಡಿಸಿದರು. ಇದರ ಪ್ರಕಾರ ಜವಳಿ ಉತ್ಪನ್ನಗಳ ಆಮದು ಸುಂಕ ಈಗಿನ ಶೇ.10ರಿಂದ ಶೇ.20ಕ್ಕೆ ಏರಿಕೆಯಾಗಲಿದೆ.
ಜವಳಿ ಉದ್ದಿಮೆಗೆ ಸಿಹಿ ಸುದ್ದಿ:
ಜವಳಿ ಉತ್ಪನ್ನಗಳ ಆಮದು ಸುಂಕವನ್ನು ಇಮ್ಮಡಿಗೊಳಿಸಿರುವುದರಿಂದ ಭಾರತದ ಜವಳಿ ಉದ್ಯಮಿಗಳಿಗೆ ಅನುಕೂಲಕರವಾಗಲಿದೆ. ಅಗ್ಗದ ವಿದೇಶಿ ಬಟ್ಟೆ, ನೂಲು, ಇತರ ಉತ್ಪನ್ನಗಳ ಆಮದಿಗೆ ಕಡಿವಾಣ ಬೀಳಲಿದೆ. ಗಾರ್ಮೆಂಟ್ಸ್ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚುವ ನಿರೀಕ್ಷೆ ಇದೆ. ಸದ್ಯಕ್ಕೆ ಸುಮಾರು 10.5 ಕೋಟಿ ಮಂದಿ ಜವಳಿ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸರಕಾರ ಕಳೆದ ತಿಂಗಳೇ ಜಾಕೆಟ್, ಸೂಟ್ಸ್, ಕಾರ್ಪೆಟ್ಸ್ ಇತ್ಯಾದಿ ಜವಳಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಇಮ್ಮಡಿಗೊಳಿಸಿತ್ತು. ಜವಳಿ ವಲಯದ ತಜ್ಞರ ಪ್ರಕಾರ ಭಾರತವು ರಫ್ತಿಗೆ ನೇರವಾಗಿ ಪ್ರೋತ್ಸಾಹ ಧನ ನೀಡಲು ಸಾಧ್ಯವಾಗುತ್ತಿಲ್ಲ. ಇದೇ ಸಂದರ್ಭ ದೇಶೀಯ ಜವಳಿ ವಲಯಕ್ಕೆ ಉತ್ತೇಜನ ನೀಡಬೇಕಾಗಿದೆ. ಹೀಗಾಗಿ ಆಮದು ಸುಂಕ ಹೆಚ್ಚಿಸಲಾಗಿದೆ. ಕಳೆದ ಜೂನ್ ತಿಂಗಳಿನಲ್ಲಿ ವಿದೇಶಿ ಬಟ್ಟೆ, ನೂಲು ಇತ್ಯಾದಿಗಳ ಆಮದು ಶೇ.9 ವೃದ್ಧಿಸಿತ್ತು ( 17 ಕೋಟಿ ಡಾಲರ್, ಅಂದಾಜು 1,156 ಕೋಟಿ ರೂ.)
ದರ ಏರಿಕೆ ಆಗದು: ಉದ್ದಿಮೆ ತಜ್ಞರ ಅಭಿಮತ
” ಆಮದು ಸುಂಕವನ್ನು ಏರಿಕೆ ಮಾಡಿರುವುದರಿಂದ ದೇಶೀಯ ಜವಳಿ ಉತ್ಪಾದನೆಗೆ ಅನುಕೂಲವಾಗಲಿದ್ದು, ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಲಿದೆ” ಎಂದು ಅಪಾರೆಲ್ ರಫ್ತು ಸಂಘಟನೆಯ ಸದಸ್ಯ ಡಾ. ಎ ಶಕ್ತಿವೇಲು ಅವರು ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ. ವಿದೇಶಿ ಗಾರ್ಮೆಂಟ್ಸ್ ಉತ್ಪನ್ನಗಳ ಬೆಲೆ ಏರಿಕೆಯಾಗಲಿರುವುದರಿಂದ ಸಹಜವಾಗಿ ಸ್ವದೇಶಿ ಉತ್ಪಾದಕರಿಗೆ ಅನುಕೂಲವಾಗಲಿದೆ. ಒಟ್ಟಾರೆಯಾಗಿ ದರ ಏರಿಕೆಯ ಆತಂಕ ಅನಗತ್ಯ. ಯಾಕೆಂದರೆ ದೇಶೀಯ ಮಾರುಕಟ್ಟೆಯಲ್ಲೂ ಸ್ಪರ್ಧಾತ್ಮಕತೆ ಇದೆ ಎಂದು ಅವರು ಹೇಳಿದರು.