ಬೆಂಗಳೂರು, ಆ.9- ರಾಜ್ಯದಲ್ಲಿ ನ್ಯಾಷನಲಿಸ್ಟ್ (ರಾಷ್ಟ್ರವಾದಿ) ಕಾಂಗ್ರೆಸ್ ಪಕ್ಷವನ್ನು ಶಕ್ತಿಯುತವಾಗಿ ಸಂಘಟಿಸುವ ಉದ್ದೇಶದಿಂದ 20 ಜಿಲ್ಲೆ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ಲಕ್ಷ್ಮಣ್ ದೀಕ್ಷಿತ್ ಅವರನ್ನು ಪಕ್ಷದ ಯುವ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ವಿನೋದ್ ಜಾದವ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸೆನಿಯೋ ಸಿಲ್ವರ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದರು.
ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವು ಸಂಪೂರ್ಣ ಸಂಖ್ಯಾಬಲ ಇಲ್ಲದ ಕಾರಣ ಅತಂತ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಎಲ್ಲ ಸಹಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರಿಂದ ಸರ್ಕಾರಿ ಯೋಜನೆಗಳು ಸರಿಯಾಗಿ ಜಾರಿಗೊಳ್ಳುತ್ತಿಲ್ಲ. ಬೆಳಗಾದರೆ ಬರೀ ಕಿತ್ತಾಟವನ್ನೇ ರಾಜ್ಯದ ಜನರು ನೋಡುತ್ತಿದ್ದಾರೆ ಎಂದು ಆರೋಪಿಸಿದರು.
ಧಾರವಾಡದಲ್ಲಿ ವಿವಿಧ ಕಟ್ಟಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮರುಪರಿಶೀಲನೆ ಮಾಡುವಂತೆ ಸಂಬಂಧಪಟ್ಟ ಇಲಾಖೆ ಸಚಿವರು ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ತನಿಖೆ ಕೈಗೊಂಡಿಲ್ಲ ಎಂದು ಅವರು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.