![Kaustubh-Rane](http://kannada.vartamitra.com/wp-content/uploads/2018/08/Kaustubh-Rane-673x381.jpg)
ಮುಂಬೈ:ಆ-9: ಉಗ್ರರ ಗುಂಡು ದೇಹವನ್ನು ಹೊಕ್ಕರೂ ಲೆಕ್ಕಿಸದೇ ಇಬ್ಬರು ಉಗ್ರರನ್ನು ಸದೆಬಡಿದು ಶೌರ್ಯ ಮೆರೆದ ಮೇಜರ್ ಕೌಸ್ತುಭ್ ರಾಣೆ ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗುರೇಜ್ ಸೆಕ್ಟರ್ ನಲ್ಲಿ ಉಗ್ರರ ಅಟ್ಟಹಾಸಕ್ಕೆ ಭಾರತೀಯ ಸೇನೆ ನಾಲ್ಕು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಈ ಪೈಕಿ ಮೇಜರ್ ಕೌಸ್ತುಭ್ ರಾಣೆ ಕೂಡ ಒಬ್ಬರು. ಬಾರಾಮುಲ್ಲಾ ಜಿಲ್ಲೆಯ ರಷಿಯಾಬಾದ್ ಅರಣ್ಯ ಪ್ರದೇಶದ ಗುರೇಜ್ ಸೆಕ್ಟರ್ ನಲ್ಲಿ ಮಂಗಳವಾರ ಉಗ್ರರು ದಾಳಿ ನಡೆಸಿದ್ದರು. ಈ ಪೈಕಿ ಮೂವರು ಉಗ್ರರ ತಂಡವನ್ನು ಮೇಜರ್ ಕೌಸ್ತುಭ್ ರಾಣೆ ತಂಡ ಸುತ್ತುವರೆದಿತ್ತು. ಉಗ್ರರು ಮತ್ತು ಸೈನಿಕರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿತ್ತು. ಈ ಪೈಕಿ ಮೇಜರ್ ಕೌಸ್ತುಭ್ ರಾಣೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದರು.
ಆದರೆ ದುರಂತವೆಂದರೆ ಅವರು ಇಬ್ಬರು ಉಗ್ರರನ್ನು ಹೊಡೆದುರುಳಿಸುವ ವೇಳೆಗಾಗಲೇ ಅವರ ದೇಹಕ್ಕೆ ಉಗ್ರನೋರ್ವ ಸಿಡಿಸಿದ್ದ ಗುಂಡು ಹೊಕ್ಕಿತ್ತು. ಆದರೂ ಆನೋವನ್ನು ಲೆಕ್ಕಿಸದೇ ಮೇಜರ್ ಕೌಸ್ತುಭ್ ರಾಣೆ ಉಗ್ರರ ಮೇಲೆ ಮುಗಿಬಿದ್ದು ಇಬ್ಬರು ಉಗ್ರರನ್ನು ಕೊಂದು ಹಾಕಿದ್ದರು.
ಬಳಿಕ ರಕ್ತದ ಮುಡುವಿನಲ್ಲಿ ಬಿದ್ದಿದ್ದ ಕೌಸ್ತುಭ್ ರಾಣೆ ಅವರನ್ನು ಸೇನಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಪಲಿಸದೇ ಅವರು ಹುತಾತ್ಮರಾದರು. ಇದೇ ಎನ್ ಕೌಂಟರ್ ನಲ್ಲಿ ಇತರೇ ಮೂವರು ಸೈನಿಕರೂ ಕೂಡ ಹುತಾತ್ಮರಾಗಿದ್ದಾರೆ.
ಮಹಾರಾಷ್ಟ್ರದ ಮೂಲದ ಮೇಜರ್ ಕೌಸ್ತುಭ್ ರಾಣೆ ಅವರು, ರಕ್ಷಣಾ ಇಲಾಖೆ ಪರೀಕ್ಷೆಗಳನ್ನು ಪೂರ್ಣಗೊಳಿಸಿ, 2011ರಲ್ಲಿ ಚೆನ್ನೆನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಬಳಿಕ ರಾಷ್ಟ್ರೀಯ 36 ರೈಫಲ್ಸ್ ವಿಭಾಗಕ್ಕೆ ಆಯ್ಕೆಯಾದ ಕೌಸ್ತುಭ್ ರಾಣೆ 6 ವರ್ಷ ಸೇವೆ ಸಲ್ಲಿಸಿ ಮೇಜರ್ ಹುದ್ದೆಗೆ ಆಯ್ಕೆಯಾದರು.
Major Kaustubh Rane, killed in LoC,Baramulla Encounter