ಬೆಂಗಳೂರು, ಆ.7- ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಜೊತೆಗಿದ್ದ ಮಾತ್ರಕ್ಕೆ ಅದರ ತಪ್ಪುಗಳನ್ನು ಹೇಳಬಾರದೆಂದೇನೂ ಇಲ್ಲ ಎಂದು ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರಾದ ಮೇಲೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿದ್ದೇವೆ ಎಂಬ ಮಾತ್ರಕ್ಕೆ ತಪ್ಪು ಒಪ್ಪುಗಳನ್ನು ತೆರೆದಿಡಬಾರದೆಂಬ ನಿಯಮಗಳೇನೂ ಇಲ್ಲ ಎಂದು ಹೇಳುವ ಮೂಲಕ ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಣಿಗೊಳಿಸಲು ಮುಂದಾಗಿದ್ದಾರೆ.
ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಗಂಡ-ಹೆಂಡತಿ ಸಂಸಾರಕ್ಕೆ ಹೋಲಿಸಿದ ಅವರು, ಸಂಸಾರವೆಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ. ಚುನಾವಣೆ ಮುಂದಿಟ್ಟುಕೊಂಡು ಜೆಡಿಎಸ್ ಪಕ್ಷದ ಜವಾಬ್ದಾರಿ ಹೊತ್ತಿರುವ ಈ ಸಂದರ್ಭದಲ್ಲಿ ಸವಾಲುಗಳು ಹೆಚ್ಚಾಗಿವೆ. ಸರ್ಕಾರದ ವಿರುದ್ಧ ಕೇಳಿಬರುವ ಟೀಕೆಗಳಿಗೂ ಉತ್ತರಿಸಬೇಕಾಗುತ್ತದೆ.
ಸಮ್ಮಿಶ್ರ ಸರ್ಕಾರದ ಮೈತ್ರಿ ಧರ್ಮ ಕಾಪಾಡಿಕೊಂಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಪ್ರೀತಿ, ವಾತ್ಸಲ್ಯ ಹಂಚುವ ಮೂಲಕ ಸ್ನೇಹಮಯಿ ಹೋರಾಟವನ್ನು ಈ ಹಳ್ಳಿ ಹಕ್ಕಿ ಮಾಡಲಿದೆ.
ಆಪರೇಷನ್ ಕಮಲ ನಡೆಯುವುದಿಲ್ಲ :
ಕರ್ನಾಟಕ ರಾಜ್ಯ ರಾಜಕಾರಣದ ಶುದ್ಧೀಕರಣ ಆಗಬೇಕಿದ್ದು, ಅದಕ್ಕಾಗಿ ಸಾಕಷ್ಟು ಪ್ರಯತ್ನವೂ ಆಗಬೇಕಿದೆ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಆಪರೇಷನ್ ಕಮಲ, ಆಪರೇಷನ್ ಜೆಡಿಎಸ್, ಆಪರೇಷನ್ ಕಾಂಗ್ರೆಸ್ ನಡೆಸಲಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಸುಮ್ಮನೆ ಕೂರಲಾಗುವುದಿಲ್ಲ. ನಿತ್ಯ ನಡೆಯುವ ಆಗು ಹೋಗುಗಳ ಮೇಲೆ ಒಂದು ಕಣ್ಣು ಇಟ್ಟಿರಲೇಬೇಕು. ಪ್ರಧಾನ ವಿರೋಧ ಪಕ್ಷವಾಗಿರುವ ಬಿಜೆಪಿ ಮಾಡುವ ಟೀಕೆಗಳು ಆರೋಗ್ಯಕರವಾಗಿರಬೇಕು. ಸುಖಾಸುಮ್ಮನೆ ಆರೋಪ ಮಾಡುವುದು, ಜನರನ್ನು ತಪ್ಪುದಾರಿಗೆ ಎಳೆಯುವುದು ಸಮಂಜಸವಲ್ಲ.
ಉ-ಕ ಕ್ಕೆ ಜೆಡಿಎಸ್ ಕೊಡುಗೆ :
ಮಾಜಿ ಪ್ರಧಾನಿ ದೇವೇಗೌಡರು ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕ ಭಾಗಕ್ಕೆ ಏನೇನು ಕೊಡುಗೆ ನೀಡಿದ್ದಾರೆ ಎಂಬ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುವುದು. ಮಹದಾಯಿ ನದಿನೀರಿಗಾಗಿ ಜೆಡಿಎಸ್ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ, ತ್ವರಿತ ನೀರಾವರಿ ಯೋಜನೆ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಗೌಡರ ಕೊಡುಗೆ ಏನೆಂಬುದನ್ನು ಜನರಿಗೆ ತಿಳಿಸಿ ಹೇಳಬೇಕಾಗಿದೆ. ಕೇವಲ ರಾಜಕೀಯ ಮೇಲಾಟದಿಂದ ಏನೂ ಪ್ರಯೋಜನವಿಲ್ಲ ಎಂದು ಹೇಳಿದರು.
ಜೆಡಿಎಸ್ನ್ನು ಅಪ್ಪ -ಮಕ್ಕಳ ಪಕ್ಷವೆಂದು ಟೀಕೆ ಮಾಡುವವರು ಇದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈ ರೀತಿ ಮಾತನಾಡಿದ್ದಾರೆ. ನಾನು ಹಾಗೂ ಸಿದ್ದರಾಮಯ್ಯನವರು ಈ ಹಿಂದೆ ತಾಯಿ ಮತ್ತು ಮಗನ ಪಕ್ಷದಲ್ಲೇ ಜತೆಯಲ್ಲೇ ಇದ್ದೇವಲ್ಲ ಎಂದು ಮರುಪ್ರಶ್ನೆ ಹಾಕಿದರು.
ವಸ್ತು ಸ್ಥಿತಿಗೆ ಆದ್ಯತೆ:
ದೇವೇಗೌಡರು ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಪ್ರಿಯವಾಗಿರುವುದನ್ನು ನೇರವಾಗಿ ಹೇಳಬಲ್ಲಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಅಪ್ರಿಯವಾಗಿರುವುದನ್ನು ಪ್ರಿಯವಾಗುವ ರೀತಿಯಲ್ಲಿ ಹೇಳುವ ಅನುಭವಿದೆ. ಗೌಡರು ಮತ್ತು ಕುಮಾರಸ್ವಾಮಿ ಇಬ್ಬರು ಕೂಡ ವಸ್ತು ಸ್ಥಿತಿಗೆ ತೆರೆದುಕೊಳ್ಳುವ ಮನಸ್ಸುಳ್ಳವರು. ನನ್ನ ಅನುಭವ ಹಾಗೂ ಹಿರಿತನದಿಂದ ವಸ್ತುಸ್ಥಿತಿಯನ್ನು ಅವರ ಗಮನಕ್ಕೆ ತಂದಾಗ ಮುಕ್ತ ಮನಸ್ಸು ಹೊಂದಲಿದ್ದಾರೆ ಎಂಬ ವಿಶ್ವಾಸ ವಿಶ್ವನಾಥ್ ಅವರದು.
ಅಹಿಂದ ನಾಯಕರೆಂದು ಗುರುತಿಸಿಕೊಳ್ಳುವುದಕ್ಕಿಂತ ಆ ವರ್ಗದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಎಂದೂ ಕೂಡ ಹಿಂದುಳಿದ ನಾಯಕರೆಂದು ಬಿಂಬಿಸಿಕೊಳ್ಳದೆ ಆ ವರ್ಗದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತ್ಯತೀತ ತತ್ವ ಸಿದ್ಧಾಂತಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ಇದೆ. ಸಿದ್ದರಾಮಯ್ಯನವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಸಮನ್ವಯ ಸಮಿತಿಯು ಪಕ್ಷ-ಪಕ್ಷಗಳ ನಡುವಿನ ಸಮನ್ವಯತೆ ಸಾಧಿಸಬೇಕಾಗಿದೆ. ಸಿದ್ದರಾಮಯ್ಯ ಅವರ ಪಕ್ಷವನ್ನು ಬಲಿಕೊಟ್ಟು ನಮ್ಮ ಪಕ್ಷದ ರಕ್ಷಣೆ ಮಾಡಬೇಕಾದ ಅಗತ್ಯವಿಲ್ಲ. ನಮ್ಮ ನಮ್ಮ ಪಕ್ಷಗಳನ್ನು ನಾವೇ ಸದೃಢಮಾಡಿಕೊಳ್ಳುತ್ತೇವೆ.
ಜೆಡಿಎಸ್ ಪಕ್ಷದ ಜವಾಬ್ದಾರಿ ಹೊತ್ತ ಮೇಲೆ ಹೊಸ ಸ್ವರೂಪ ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ತಂಡವನ್ನು ರಚಿಸಿಕೊಂಡು ಸಿದ್ಧತೆ ನಡೆಸಲಾಗುವುದು. ಕಾರ್ಯಕರ್ತರು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಭಾವನಾತ್ಮಕವಾಗಿ ಸ್ಪಂದಿಸುವಂತಹ ಕೆಲಸ ಮಾಡಲಾಗುವುದು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದಿಂದ ದೂರ ಸರಿದಿರುವ ಜನತಾಪರಿವಾರದ ಯಾವೊಬ್ಬ ನಾಯಕರೂ ಮರಳಿ ಬಂದರೆ ಮುಕ್ತ ಸ್ವಾಗತ ನೀಡಲಾಗುವುದು. ಜೆಡಿಎಸ್ ಪಕ್ಷದ ತತ್ವ, ಸಿದ್ಧಾಂತ, ಮೌಲ್ಯಗಳನ್ನು ಒಪ್ಪಿ ಬರುವವರಿಗೆ ಸ್ವಾಗತ ಇದ್ದೇ ಇರುತ್ತದೆ.
ಹಳ್ಳಿಹಕ್ಕಿಯ ಹಾಡಿಗೆ ಜೆಡಿಎಸ್ ಸಾರಥ್ಯ ಒಲಿದಿದೆ. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಯಿತೆಂದು ತಾವೇ ಬೆಳೆಸಿ ಹರಸಿದವರು ನಿರ್ಲಕ್ಷ್ಯ ಮಾಡಿದರೆಂದು ಸಿಡಿದೆದ್ದು, ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷ ಸೇರಿ ಶಾಸಕರಾಗಿರುವ ಎಚ್.ವಿಶ್ವನಾಥ್ ಈಗ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು.
ದೇವರಾಜ ಅರಸು ಅವರ ಸಿದ್ಧಾಂತಗಳನ್ನು ನಂಬಿ ಪಾಲಿಸಿಕೊಂಡುಬರುತ್ತಿರುವ ಕರ್ಮಭೂಮಿ ಹುಣಸೂರು ಕ್ಷೇತ್ರದಿಂದ ಆಯ್ಕೆಯಾಗಿರುವುದು ಅವರಿಗೆ ಒಂದು ಹೆಮ್ಮೆ.
ವಿಶ್ವನಾಥ್ ಅವರಿಗೆ ಸವಾಲಾಗಿರುವುದು ನಗರ ಸ್ಥಳೀಯ ಸಂಸ್ಥೆ ಚುನಾವಣೆ. ಮುಂದೆ ಬರುವ ಲೋಕಸಭೆ ಚುನಾವಣೆ. ಇವೆರಡರಲ್ಲೂ ಅವರು ಸಕ್ಸಸ್ ಆಗುತ್ತಾರೆ ಎಂಬ ವಿಶ್ವಾಸದಿಂದಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅವರಿಗೆ ಜೆಡಿಎಸ್ ಪಕ್ಷದ ಅಧ್ಯಕ್ಷ ಹುದ್ದೆ ವಹಿಸಿದ್ದಾರೆ.