
ಹಾಸನ: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಇಂದು 28 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಜನರ ಮಧ್ಯೆ ಇರಲು ನನಗೆ ತುಂಬಾ ಸಂತೋಷ ವಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಶುಭಹಾರೈಕೆ ಮಾಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿಕೊಂಡ ಪ್ರಜ್ವಲ್, ತಮ್ಮ ರಾಜಕೀಯ ಜೀವನ ಕುರಿತು ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೆನೆ ಎಂದು ಹೇಳಿದ್ದಾರೆ.
ಹಾಸನದ ಹೊಳೇನರಸೀಪುರದಲ್ಲಿಂದು ಮಾತನಾಡಿದ ಅವರು, ಪಕ್ಷ ಸಂಘಟನೆಗಾಗಿ ಈ ಬರ್ತ್ ಡೇಯಿಂದ ಹೊಸ ರೆಸ್ಯೊಲ್ಯೂಷನ್ ಮಾಡಿಕೊಂಡಿದ್ದೇನೆ. ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರ ಕುಂದು ಕೊರತೆ ವಿಚಾರಿಸುವ ಒಂದು ಅಂಶ ನನ್ನ ಮನಸ್ಸಿನಲ್ಲಿದೆ ಎಂದು ಹೇಳಿಕೊಂಡರು.
ಇದೇ ವೇಳೆ ಲೋಕಸಭೆಗೆ ಸ್ಪರ್ಧೆ ಕುರಿತು ಮಾತನಾಡಿ, ಈ ಕುರಿತು ಇದುವರೆಗೂ ನಾನು ಯಾರೊಂದಿಗೂ ಮಾತನಾಡಿಲ್ಲ. ಈ ವಿಚಾರದಲ್ಲಿ ದೇವೇಗೌಡರೊಂದಿಗೂ ಚರ್ಚಿಸುವ ಅವಕಾಶವೂ ಸಿಕ್ಕಿಲ್ಲ. ಯಾವುದೇ ಮಾತುಕತೆ ನಡೆದಿಲ್ಲ. ಮೊದಲು ಪಕ್ಷ ಸಂಘಟನೆಗೆ ನಾನು ತೊಡಗಿಸಿಕೊಂಡಿದ್ದೇನೆ. ನಾನು ಚುನಾವಣೆಗೆ ಹೋಗುವ ಮುನ್ನ ಪಕ್ಷದಲ್ಲಿ ಕೆಳಮಟ್ಟದ ಸಂಘಟನೆ ಅವಶ್ಯಕತೆ ಇದೆ. ಸದ್ಯ ನಾನು ಪಕ್ಷ ಸಂಘಟನೆ ಕುರಿತು ಗಮನಹರಿಸುತ್ತೇನೆ. ಚುನಾವಣೆ ಸ್ಪರ್ಧೆಯ ವಿಚಾರ ದೊಡ್ಡವರಿಗೆ ಬಿಟ್ಟಿದ್ದು. ನನ್ನ ಅವರು ಯಾವುದಕ್ಕೆ ಬಳಸಿಕೊಳ್ಳುತ್ತಾರೆ ಅದಕ್ಕೆ ನಾನು ಸಿದ್ಧವಾಗಿರುತ್ತೇನೆ ಎಂದು ಹೇಳಿದ್ದಾರೆ.