ಇಂಡೋನೇಷ್ಯಾ: ಪ್ರಬಲ ಭೂಕಂಪನಕ್ಕೆ ಕನಿಷ್ಟ 82 ಮಂದಿ ಬಲಿ, ನೂರಾರು ಮಂದಿಗೆ ಗಾಯ

ಜಕಾರ್ತ: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಛ 82 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆಗ್ನೇಯ ಏಷ್ಯಾದ ಪ್ರಮುಖ ಪ್ರವಾಸಿ ತಾಣ ಇಂಡೋನೇಷ್ಯಾದ ಪ್ರಮುಖ ಕರಾವಳಿ ದ್ವೀಪ ಬಾಲಿಯಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ತೀವ್ರತೆಗೆ ಬಾಲಿ ಸೇರಿದಂತೆ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿನ ಬಹುಮಹಡಿ ಕಟ್ಟಡಗಳು ನೆಲಕ್ಕುರುಳಿದ್ದು, ಈ ವೇಳೆ ಕನಿಷ್ಠ 82 ಮಂದಿ ಸಾವನ್ನಪ್ಪಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಂತೆಯೇ ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಇನ್ನು ಭೂಕಂಪನದಿಂದಾಗಿ ಲೊಂಬಾಕ್ ರಾಜ್ಯದ ಮಟರಮ್ ನಗರದಲ್ಲಿ ಭಾರಿ ಸಾವುನೋವುಗಳಾಗಿದ್ದು, ಈ ಒಂದು ನಗರದಲ್ಲೇ ಸಾವಿಗೀಡಾದವರ ಸಂಖ್ಯೆ 50 ದಾಟಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಇಂಡೋನೇಷ್ಯಾ ಸೇನೆ, ಸ್ಥಳೀಯ ಅಗ್ನಿಶಾಮಕ ದಳಗಳು, ನೈಸರ್ಗಿಕ ವಿಕೋಪ ನಿರ್ವಹಣಾ ಸಿಬ್ಬಂದಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಇನ್ನು ಭೂಕಂಪನದ ಬಳಿಕ ಕೆಲ ಪ್ರದೇಶಗಳಲ್ಲಿ ಲಘುಭೂಕಂಪನ ಸಂಭವಿಸಿದ್ದು, ಪ್ರಸ್ತುತ ಸಂಭವಿಸಿರುವ ಭೂಕಂಪನದಿಂದಾಗಿ ಸಂಭಾವ್ಯ ಸುನಾಮಿ ಕುರಿತು ಹವಾಮಾನ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವರೆಗೂ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿಲ್ಲವಾದರೂ, ಸಮುದ್ರತೀರ ಪ್ರದೇಶಗಳ ಜನರು ಮುಂಜಾಗೃತಾ ಕ್ರಮವಾಗಿ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ