ಬೆಂಗಳೂರು, ಆ.6- ತಮ್ಮ ಮೇಲೆ ಇಟ್ಟಿರುವ ಅಭಿಮಾನ, ನಂಬಿಕೆ, ವಿಶ್ವಾಸಕ್ಕೆ ಧಕ್ಕೆಯಾಗದಂತೆ ಪಕ್ಷಕ್ಕೆ ಹೊಸ ಸ್ವರೂಪ ನೀಡಲಾಗುವುದು ಎಂದು ಜೆಡಿಎಸ್ನ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.
ಪಕ್ಷದ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿಂದು ವಿಧ್ಯುಕ್ತವಾಗಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಪಕ್ಷದ ರಾಜ್ಯ ಸಮಿತಿಗಳನ್ನು ವಿಸರ್ಜನೆ ಮಾಡಿ ಹಿರಿಯರು ಹಾಗೂ ಯುವ ಪಡೆಗಳನ್ನೊಳಗೊಂಡ ಹೊಸ ತಂಡ ರಚಿಸಲಾಗುವುದು. ಮುಂಬರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಪಕ್ಷವನ್ನು ಸಜ್ಜುಗೊಳಿಸಬೇಕಾಗಿದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಮುಂಬರುವ ಲೋಕಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಪಕ್ಷಕ್ಕೆ ಹೊಸ ಸ್ವರೂಪ ನೀಡಿ ಸಜ್ಜುಗೊಳಿಸಬೇಕಾಗಿದೆ. ಜನತಾ ಪರಿವಾರವನ್ನು ತೊರೆದು ತಟಸ್ಥವಾಗಿರುವ ಹಾಗೂ ಬೇರೆ ಬೇರೆ ಕಡೆ ಗುರುತಿಸಿಕೊಂಡಿರುವವರು ಜೆಡಿಎಸ್ ಪಕ್ಷಕ್ಕೆ ಬರಬೇಕೆಂದು ಕರೆ ಕೊಟ್ಟರು.
ಪಕ್ಷಕ್ಕೆ ಬರುವವರನ್ನು ಗೌರವವಾಗಿ ಸ್ವಾಗತಿಸುತ್ತೇವೆ. ರಾಜ್ಯಕ್ಕೆ ಹೊಸ ಬಲ, ಹೊಸ ಗಾಳಿ, ಹೊಸ ರೀತಿಯ ರಾಜಕಾರಣ ಬೇಕಾಗಿದೆ. ಕಾರ್ಯಕರ್ತರಿಲ್ಲದೆ ಯಾವ ಪಕ್ಷವೂ ಇಲ್ಲ. ಅವರು ಪಕ್ಷದ ಆಸ್ತಿಯಾಗಿದ್ದು, ಬಾವುಟ ಕಟ್ಟುವುದರಿಂದ ಹಿಡಿದು, ಹೋರಾಟ ಮಾಡುವವರೆಗೂ ಅವರು ಪಕ್ಷಕ್ಕೆ ಆಸರೆಯಾಗಿರುತ್ತಾರೆ. ಕಾರ್ಯಕರ್ತರನ್ನು ಜೋಪಾನದಿಂದ ಜತೆಯಲ್ಲಿಟ್ಟುಕೊಂಡು ಸಾಧ್ಯವಿರುವ ಅವಕಾಶಗಳನ್ನು ಕಾರ್ಯಕರ್ತರಿಗೆ ಕೊಡಬೇಕಾಗಿದೆ. ಸರ್ಕಾರಕ್ಕಿಂತ ಪಕ್ಷ ದೊಡ್ಡದು ಎಂದರು.
ನಿನ್ನೆ ತಮ್ಮನ್ನು ಒಕ್ಕೊರಲಿನಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಯಿತು. ಇಂದು ಬೆಳಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಚನ್ನಮ್ಮದೇವೇಗೌಡರ ಆಶೀರ್ವಾದ ಪಡೆದು ದೊಡ್ಡಗಣಪತಿ ಹಾಗೂ ಗವಿಗಂಗಾಧರೇಶ್ವರ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಅಧಿಕಾರವನ್ನು ಸ್ವೀಕರಿಸಿದ್ದೇನೆ ಎಂದರು.
ತಾವು ಜೆಡಿಎಸ್ಗೆ 14 ತಿಂಗಳ ಹಿಂದೆ ಸೇರ್ಪಡೆಯಾಗಿದ್ದು, ಮಾಜಿ ಪ್ರಧಾನಿ ದೇವರಾಜ ಅರಸು ಪ್ರತಿನಿಧಿಸುತ್ತಿದ್ದ ಹುಣಸೂರಿನಲ್ಲಿ ತಮ್ಮನ್ನು ಸ್ಪರ್ಧಿಸಿ, ವಿಧಾನಸಭೆಗೆ ಚುನಾಯಿತರಾಗುವಂತೆ ದೇವೇಗೌಡರು ಮಾಡಿದ್ದಾರೆ. ಈಗ ದೇವೇಗೌಡರು, ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರು ರಾಜ್ಯಾಧ್ಯಕ್ಷ ಸ್ಥಾನದ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ ಎಂದರು.
ಮಾಜಿ ಸಚಿವ ಬಿ.ಬಿ.ಲಿಂಗಯ್ಯ ಮಾತನಾಡಿ, ಜನತಾದಳದ ರಾಜ್ಯಾಧ್ಯಕ್ಷರಾಗಿರುವ ವಿಶ್ವನಾಥ್ ಅವರಿಂದ ಪಕ್ಷಕ್ಕೆ ಹೊಸ ಶಕ್ತಿ ದೊರೆತು ಜನತಾದಳದ ಗತವೈಭವ ವಿಜೃಂಭಿಸುವಂತಾಗಲಿ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಜೆಡಿಎಸ್ ಬಗ್ಗೆ ಬಿಜೆಪಿಗೆ ನಡುಕ ಉಂಟಾಗಿದೆ. ಇಡೀ ರಾಜ್ಯದಲ್ಲಿ ಜೆಡಿಎಸ್ ಸಂಚಲನ ಉಂಟಾಗಿದೆ. ನೂತನ ರಾಜ್ಯಾಧ್ಯಕ್ಷರಾದ ವಿಶ್ವನಾಥ್ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು ಎಂದರು.
ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ವಿಶ್ವನಾಥ್ ಅವರ ಸಾರಥ್ಯದಲ್ಲಿ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹೆಚ್ಚು ಸ್ಥಾನ ಗೆಲ್ಲಲು ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು.
ಅಹವಾಲು ಸ್ವೀಕಾರ:
ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಅವರು ಜೆ.ಪಿ.ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.