ಬೆಂಗಳೂರು, ಆ.6- ಮಿತಿ ಮೀರಿದ ಅಕ್ರಮ ಜಾಹೀರಾತುಗಳ ಹಾವಳಿಯಿಂದ ಬೆಂಗಳೂರು ಮಹಾನಗರ ಅಂದಗೆಡುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ ಹಾಕಿ ನೂತನ ಜಾಹೀರಾತು ನೀತಿ ರೂಪಿಸುವಂತೆ ಕಟ್ಟಪ್ಪಣೆ ಮಾಡಿರುವ ಕಾರಣ ಇಂದು ಕರೆದ ಬಿಬಿಎಂಪಿ ವಿಶೇಷ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು.
ನೂತನ ಜಾಹೀರಾತು ನೀತಿ ರೂಪಿಸಿ ಹೈಕೋರ್ಟ್‍ಗೆ ಸರ್ಕಾರ ವರದಿ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬಿಬಿಎಂಪಿ ಜಾಹೀರಾತು ನಿಷೇಧ ಶಿಫಾರಸ್ಸನ್ನು ಕಳುಹಿಸಿಕೊಡುವ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಸಭೆಯಲ್ಲಿ ಗಹನವಾದ ಚರ್ಚೆ ನಡೆಸಿದರು.
ನಗರದಲ್ಲಿ ಅಕ್ರಮ ಜಾಹೀರಾತುಗಳಿಗೆ ಕಡಿವಾಣ ಹಾಕುವ ಬಗ್ಗೆ ನೀತಿ ನಿಯಮಗಳಿದ್ದರೂ ಅನುಷ್ಠಾನಗೊಳಿಸದ ಅಧಿಕಾರಿಗಳ ವಿರುದ್ಧ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಈ ಸಂದರ್ಭದಲ್ಲಿ ಮಾತನಾಡಿ, ಅಕ್ರಮ ಫ್ಲೆಕ್ಸ್‍ಗಳು ಆಕಾಶದಲ್ಲಿರುವ ನಕ್ಷತ್ರದಂತಾಗಿವೆ. ಅವುಗಳನ್ನು ಹೇಗೆ ಎಣಿಸಲು ಸಾಧ್ಯವಿಲ್ಲವೋ ಅದೇ ರೀತಿ ನಗರದಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್‍ಗಳನ್ನು ಎಣಿಸಲು ಸಾಧ್ಯವಿಲ್ಲ. ಫ್ಲೆಕ್ಸ್‍ಗಳನ್ನು ತೆರವುಗೊಳಿಸಲು ಪಾಲಿಕೆಯಲ್ಲಿ ನಿಗದಿತ ಸಿಬ್ಬಂದಿಗಳಿಲ್ಲ. ಅನಧಿಕೃತ ಫ್ಲೆಕ್ಸ್‍ಗಳಿಗೆ ದಂಡ ವಿಧಿಸುವ ಕಾನೂನು ಕಟ್ಟು ನಿಟ್ಟಾಗಿ ಪಾಲನೆ ಯಾಗುತ್ತಿಲ್ಲ. ಕ್ರಿಕೆಟ್ ಸ್ಟೇಡಿಯಂನಲ್ಲೂ ಜಾಹೀರಾತು ಫಲಕ ಅಳವಡಿಕೆ ಮಾಡಲಾಗುತ್ತಿದೆ. ಇದರಿಂದ ಪಾಲಿಕೆಗೆ ತೆರಿಗೆ ಬರುತ್ತಿಲ್ಲ. ವಿಧಾನಸೌಧ ಸುತ್ತಮುತ್ತ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಅಳವಡಿಸದಂತೆ ನಿಯಮ ಜಾರಿಗೆ ತರಬೇಕು ಎಂದು ಹೇಳಿದರು.
ನಗರದಲ್ಲಿರುವ ಹಲವು ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಿರ್ಲಕ್ಷಿಸಲಾಗುತ್ತಿದೆ. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಸಲು ಕಟ್ಟುನಿಟ್ಟಿನ ಕ್ರಮ ಅಗತ್ಯ. ಫ್ಲೆಕ್ಸ್, ಬ್ಯಾನರ್‍ಗಳನ್ನು ನಗರದಲ್ಲಿ ಸಂಪೂರ್ಣವಾಗಿ ನಿಷೇಧಿಸಿದರೆ ಉತ್ತಮ ಎಂದು ಸಲಹೆ ನೀಡಿದರು.
ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಜಾಹೀರಾತು ಕುರಿತು ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೈಕೋರ್ಟ್ ಸೂಚನೆ ನೀಡಬೇಕಾಯಿತು. 2010-11 ರಲ್ಲಿ ನಟರಾಜ್ ಅವರು ಮೇಯರ್ ಆಗಿದ್ದಾಗ ಜಾಹೀರಾತು ನೀತಿ ರಚನೆ ಮಾಡಬೇಕೆಂದು ನಿರ್ಧಾರ ಮಾಡಿದ್ದೆವು. 2006 ಮತ್ತು 2011ರ ಜಾಹೀರಾತು ಬೈಲಾ ಎರಡೂ ಚೆನ್ನಾಗಿಯೇ ಇದೆ. 2012ರಲ್ಲಿ ಉತ್ತಮ ಬೈಲಾ ಮಾಡಿದೆವು. ಅದನ್ನು ಜಾರಿಗೆ ತಂದಿದ್ದರೆ ಸಾಕಾಗಿತ್ತು. ಆ ನೀತಿ ಜಾರಿ ಮಾಡಿದ್ದರೆ ಹೈಕೋರ್ಟ್‍ನಿಂದ ಛೀಮಾರಿ ಹಾಕಿಕೊಳ್ಳುವ ಅಗತ್ಯಬರುತ್ತಿರಲಿಲ್ಲ ಎಂದು ಹೇಳಿದರು.
ನಗರದ ಮೇಲ್ಸೇತುವೆಗಳ ಮೇಲೆ ಜಾಹೀರಾತು ಫಲಕಗಳನ್ನು ಹಾಕುವುದನ್ನು ನಿಷೇಧಿಸಬೇಕು. ಈ ರೀತಿ ಹಾಕುವುದರಿಂದ ಅಪಘಾತವಾಗುವ ಸಂಭವವಿದೆ. ನಗರದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಅನಧಿಕೃತ ಜಾಹೀರಾತು ಫಲಕಗಳಿವೆ. ಜಾಹೀರಾತು ಕಂಪೆನಿಗಳಿಂದ ಸುಮಾರು 369 ಕೋಟಿ ರೂ. ಬಾಕಿ ಇದೆ. ಅದನ್ನು ಮೊದಲು ವಸೂಲಿ ಮಾಡಬೇಕು. ಜಾಹೀರಾತು ಫಲಕ ಅಳವಡಿಸುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ಕುದುರೆ ಜೂಜಿಗೆ ತೆರಿಗೆ ಏಕೆ ಸಂಗ್ರಹ ಮಾಡುತ್ತಿಲ್ಲ? ಎರಡರಷ್ಟು ತೆರಿಗೆಯನ್ನು ಸಂಗ್ರಹ ಮಾಡಬೇಕು. ಅರೆನಗ್ನ ಜಾಹೀರಾತು ಬೇಡ ಎಂದು ಅವರು ಹೇಳಿದರು.
ಪಾರಂಪರಿಕ ಕಟ್ಟಡ, ಸ್ಮಶಾನ, ಉದ್ಯಾನವನ, ದೇವಾಲಯಗಳಲ್ಲಿ ಹೋರ್ಡಿಂಗ್ ಹಾಕಲು ಅವಕಾಶ ಕೊಡಬಾರದು. ಸ್ಕೈವಾಕ್ ಅವಶ್ಯಕತೆ ಇರುವ ಕಡೆ ಹಾಕಿ ಇಲ್ಲದಿದ್ದರೆ ಕೋರ್ಟ್ ಮಧ್ಯಪ್ರವೇಶಿಸುವ ಕಾಲ ಬರುತ್ತದೆ ಎಂದು ಹೇಳಿದರು.
ಬಿಜೆಪಿ ಸದಸ್ಯ ಮಂಜುನಾಥ್‍ರಾಜು ಮಾತನಾಡಿ, ಶಾಂತಕುಮಾರಿ ಅವರು ಮೇಯರ್ ಆಗಿದ್ದಾಗ ಜಾಹೀರಾತು ನಿಷೇಧ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಜಾಹೀರಾತು ವಿಭಾಗಕ್ಕೆ 8 ವರ್ಷಕ್ಕೆ ಕೇವಲ 150 ಕೋಟಿ ಶುಲ್ಕ ಸಂಗ್ರಹವಾಗಿದೆ. ಎಲ್ಲಾ ಲಾಭ ಜಾಹೀರಾತು ಏಜೆನ್ಸಿಗಳಿಗೆ ಆಗುತ್ತಿದೆ. ಜಾಹೀರಾತು ವಿಭಾಗವನ್ನೇ ತೆಗೆದುಹಾಕಿ. ಸೂಕ್ತ ನಿಯಮ ಜಾರಿಯಾಗುವ ತನಕ ಆ ವಿಭಾಗವನ್ನು ಮುಚ್ಚುವುದೇ ಒಳ್ಳೆಯದು ಎಂದು ಸಭೆಯಲ್ಲಿ ಹೇಳಿದರು.