ಬೆಂಗಳೂರು: ಭಾರತದ ಬಹುನಿರೀಕ್ಷಿತ ಯೋಜನೆ ಚಂದ್ರಯಾನ-2 ಮುಂದಕ್ಕೆ ಹೋಗಿದೆ. ಈ ಹಿಂದಿನ ಲೆಕ್ಕಾಚಾರದ ಪ್ರಕಾರ ಇದೇ ಅಕ್ಟೋಬರ್ಗೆ ಈ ಮಿಷನ್ ನಭಕ್ಕೆ ಜಿಗಿಯಬೇಕಿತ್ತು.
ಇಸ್ರೋ ಅಧಿಕೃತ ಹೇಳಿಕೆಯ ಪ್ರಕಾರ ಚಂದ್ರಯಾನ-2 ಕೆಲ ತಾಂತ್ರಿಕ ಕಾರಣದಿಂದ ಮುಂದಕ್ಕೆ ಹೋಗಿದೆ. ಮುಂದಿನ ವರ್ಷ ಜನವರಿಯಲ್ಲಿ ರಾಕೆಟ್ ಲಾಂಚ್ ಆಗಲಿದ್ದು, ಫೆಬ್ರವರಿಯಲ್ಲಿ ಚಂದ್ರನ ಅಂಗಳಕ್ಕೆ ಕಾಲಿಡಲಿದೆ ಎಂದು ಯು.ಆರ್. ರಾವ್ ಸ್ಯಾಟಲೈಟ್ ಸೆಂಟರ್ನ ನಿರ್ದೇಶಕ ಡಾ. ಎಮ್. ಅಣ್ಣಾದೊರೈ ತಿಳಿಸಿದ್ದಾರೆ.
ಸದ್ಯ ಎಲ್ಲಾ ರೀತಿಯ ಪರೀಕ್ಷೆಗಳನ್ನೂ ನಡೆಸಲಾಗುತ್ತಿದ್ದು, ಬೆಂಗಳೂರಿನ ಶ್ರೀ ಹರಿಕೋಟಾದಿಂದ ಉಡಾವಣೆ ಮಾಡಲಾಗುತ್ತದೆ ಎಂದು ಅಣ್ಣಾದೊರೈ ತಿಳಿಸಿದ್ದಾರೆ. ಚಂದ್ರಯಾನ-2ರ ಯೋಜನೆ ದೊಡ್ಡದಾಗಿದ್ದು, ಈ ಯೋಜನೆಗೆ ಬಾಹುಬಲ್ ಎಂದೂ ಹೆಸರು ನೀಡಲಾಗಿದೆ. ಈ ರಾಕೆಟ್ನ ಸಂಪೂರ್ಣ ಸಾಮರ್ಥ್ಯ 640 ಟನ್ ಆಗಿದ್ದು ಇದೇ ಕಾರಣಕ್ಕೆ ಈ ಹೆಸರನ್ನಿಡಲಾಗಿದೆ. ಜೊತೆಯಲ್ಲಿ ಇದು ಭಾರತ ಬಾಹ್ಯಾಕಾಶ ಯೋಜನೆಯಲ್ಲೇ ಅತ್ಯಂತ ಭಾರವಾಗಿದ್ದು ಎನ್ನಲಾಗಿದೆ.
ಡಿಸೆಂಬರ್ನಲ್ಲಿ ಹಾರಲಿದೆ ಸ್ಪ್ಯಾರೋ..!
ಭಾರತದ ಚಂದ್ರಯಾನದ ಯೋಜನೆ ನಡೆಯುತ್ತಿದ್ದರೆ ಅತ್ತ ಇಸ್ರೇಲ್ ಸಹ ಚಂದ್ರನ ಅಂಗಳಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದು, ಸ್ಪ್ಯಾರೋ ಹೆಸರಿನ ರಾಕೆಟ್ ಉಡಾವಣೆ ಮಾಡಲಿದೆ. ಭಾರತದ ಯೋಜನೆ ಮುಂದಕ್ಕೆ ಹೋಗುತ್ತಿದ್ದಂತೆ ಇಸ್ರೇಲ್ ಡಿಸೆಂಬರ್ನಲ್ಲಿ ಭಾರತಕ್ಕಿಂತ ಮುಂಚಿತವಾಗಿ ರಾಕೆಟ್ ಉಡಾವಣೆ ಮಾಡಲಿದೆ. ಈ ರಾಕೆಟ್ ಮುಂದಿನ ವರ್ಷ ಫೆಬ್ರವರಿ 13ರಂದು ಗುರಿ ತಲುಪಲಿದೆ.
ಭಾರತ 2008ರಲ್ಲೇ ಚಂದ್ರಯಾನ ರಾಕೆಟ್ ಕಳುಹಿಸಿದ್ದು, ಅದು ಕ್ರ್ಯಾಶ್ ಲ್ಯಾಂಡಿಂಗ್ ಆಗಿತ್ತು. ಹಾಗಾಗಿ ಚಂದ್ರಯಾನ-2 ಸಾಫ್ಟ್ ಲ್ಯಾಂಡಿಂಗ್ ಆಗಲು ಸಿದ್ಧತೆ ನಡೆಸಿರುವುದರಿಂದ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿದೆ.
ನಾಲ್ಕನೇ ಸ್ಥಾನಕ್ಕೆ ಪೈಪೋಟಿ:
ಇಲ್ಲಿಯವರೆಗೆ ರಷ್ಯಾ, ಚೀನಾ ಹಾಗೂ ಅಮೆರಿಕಾ ಚಂದ್ರನ ಅಂಗಳಕ್ಕೆ ಸಾಫ್ಟ್ ಲ್ಯಾಂಡ್ ಆಗಿದ್ದು, ಸದ್ಯ ನಾಲ್ಕನೇ ಸ್ಥಾನಕ್ಕೆ ಭಾರತ ಹಾಗೂ ಇಸ್ರೇಲ್ ನಡುವೆ ಪೈಪೋಟಿ ನಿರ್ಮಾಣವಾಗಿದೆ.