
ಬೆಂಗಳೂರು, ಆ.5-ರಾಜ್ಯ ಹೈಕೋರ್ಟ್ ಸೂಚನೆಯಂತೆ ಬೆಂಗಳೂರು ನಗರದಲ್ಲಿ ಹಾಕಲಾಗಿರುವ ಫ್ಲೆಕ್ಸ್‍ಗಳ ತೆರವು ಕಾರ್ಯಾಚರಣೆಗೆ ಸಹಕರಿಸುವಂತೆ ಎಲ್ಲಾ ಪಕ್ಷದ ಮುಖಂಡರಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಬೆಂಗಳೂರು ನಗರವನ್ನು ಫ್ಲೆಕ್ಸ್ ಮುಕ್ತ ನಗರವನ್ನಾಗಿಸಿ ನಗರದ ಹಳೇ ಸೌಂದರ್ಯವನ್ನು ಮತ್ತೆ ಮರುಕಳಿಸುವಂತೆ ಮಾಡೋಣ ಎಂದು ಮುಖ್ಯಮಂತ್ರಿ ಕರೆಕೊಟ್ಟಿದ್ದಾರೆ.
ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸುವ ಬಗ್ಗೆ ಹೈಕೋರ್ಟ್‍ನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದು, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಶಿಸ್ತು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಫ್ಲೆಕ್ಸ್‍ಗಳ ಹಾವಳಿಯಿಂದ ನಗರದ ಸೌಂದರ್ಯ ಹಾಳಾಗುವುದು ಒಂದೆಡೆಯಾದರೆ ಪರಿಸರ ಮಾಲಿನ್ಯವೂ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‍ನ ಸೂಚನೆಯನ್ನು ಆಲಿಸಿ ಫ್ಲೆಕ್ಸ್‍ಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಎಲ್ಲಾ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.