
ಬೆಂಗಳೂರು,ಆ.4-ಸಮಾಜದಲ್ಲಿ ಮೋಸ, ವಂಚನೆ ಹೆಚ್ಚುತ್ತಿರುವ ಈ ದಿನಗಳಲ್ಲೂ ಸೇವೆಯಿಂದಲೇ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಹಿರಿಯ ಸ್ವತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕರೆ ನೀಡಿದರು.
ಬೆಂಗಳೂರು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್‍ನಿಂದ ನಗರದ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಟ್ಯಾಕ್ಸಿ ಸೇವೆಗಾಗಿ ನೂತನವಾಗಿ ನಿರ್ಮಿಸಿರುವ ಲಾಂಛನ ಬಿಡುಗಡೆ, ನೂತನ ಸದಸ್ಯರ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಾಲಕರು ಉತ್ತಮವಾಗಿ ಸೇವೆ ನಿರ್ವಹಿಸಬೇಕು, ಲಾಂಛನ ನಿರ್ಮಿಸಿರುವಂತೆ ಸಂಸ್ಥೆಯ ಪ್ರತಿಷ್ಠೆ, ಗೌರವ ಉಳಿಸಲು ಪ್ರತಿಯೊಬ್ಬರು ಶ್ರಮಿಸಿದಾಗ ಮಾತ್ರ ನಿಮ್ಮೆಲ್ಲರ ಶ್ರಮ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನ್ಯಾಯಬದ್ಧವಾಗಿ ಕೆಲಸ ಮಾಡುವ ಮೂಲಕ ಸೇವಾ ಸಂಸ್ಥೆಗಳನ್ನು ನಿರ್ವಹಿಸಬೇಕು. ಆಗಲೇ ಯಾವುದೇ ಒಂದು ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿದರು.
ಸಂಸ್ಥೆಯ ಮುಖ್ಯಸ್ಥ ಆದಿತ್ಯ ಮಾತನಾಡಿ, ಬೆಂಗಳೂರಿನಲ್ಲಿ ಈಗಾಗಲೇ ಓಲಾ ಓಬರ್‍ನಂತಹ ಸಂಸ್ಥೆಗಳು ಟ್ಯಾಕ್ಸಿ ಸೇವೆಯನ್ನು ನೀಡುತ್ತಿವೆ. ಆದರೆ ಟ್ಯಾಕ್ಸಿ ಚಾಲಕರಿಗೆ ಹೆಚ್ಚಿನ ಅನುಕೂಲವಾಗಿಲ್ಲ. ಬದಲಿಗೆ ತೊಂದರೆಯನ್ನೇ ಎದುರಿಸುತ್ತಾ ಬಂದಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯನ್ನು 450 ಮಂದಿ ಚಾಲಕರು ಒಗ್ಗೂಡಿ 18 ದಿನ ಹೋರಾಟ ನಡೆಸಿ ಕಟ್ಟಿಕೊಂಡಿದ್ದೇವೆ. ಜನರಿಗೆ ಸೇವೆ ಒದಗಿಸುವ ಪರಮ ಗುರಿಯೊಂದಿಗೆ ಕೆಲಸ ನಿರ್ವಹಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಬೆಂಗಳೂರು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ರಮೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಅಶ್ವಥ್ ಅವರು ದೊರೆಸ್ವಾಮಿ ಅವರನ್ನು ಸನ್ಮಾನಿಸಿದರು.
ಇದೇ ವೇಳೆ ಬೃಹತ್ ಬೆಂಗಳೂರು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್‍ನಿಂದ ಆ್ಯಪ್ ಸೇವೆಯನ್ನು ಆರಂಭಿಸಲಾಗಿದ್ದು, ಅದನ್ನು ಬಿಡುಗಡೆಗೊಳಿಸಲಾಯಿತು. ಬಿಬಿಎಚ್‍ಟಿಡಿಯು ಎಂಬ ಆ್ಯಪ್ ಮೂಲಕ ಬುಕಿಂಗ್ ಸೇವೆಯನ್ನು ಒದಗಿಸಲು ಸಂಸ್ಥೆ ಮುಂದಾಗಿದೆ.