
ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹಾಥಿ ಬಲ್ಗಲ್ ಎಂಬಲ್ಲಿ ಕಲ್ಲು ಕ್ವಾರಿಯೊಂದರಲ್ಲಿ ಶುಕ್ರವಾರ ರಾತ್ರಿ ಭೀಕರ ಸ್ಫೋಟ ಸಂಭವಿಸಿದ್ದು 11 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಐವರಿಗೆ ಗಂಭೀರ ಸ್ವರೂಪದ ಗಾಯಗಳಿಗೊಳಗಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರಂತದಲ್ಲಿ ಮಡಿದವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.
ಸ್ಫೋಟದ ಬಳಿಕ ಕ್ಷಣಾರ್ಧದಲ್ಲಿ ಬೆಂಕಿ ಸುತ್ತಮುತ್ತಲೂ ವ್ಯಾಪಿಸಿ 3 ಟ್ರ್ಯಾಕ್ಟರ್ಗಳು,ಲಾರಿ ಮತ್ತು ಶೆಡ್ ಗಳು ಭಸ್ಮವಾಗಿವೆ ಎಂದು ಕರ್ನೂಲ್ ಎಸ್ಪಿ ತಿಳಿಸಿದ್ದಾರೆ.
ಮೃತರೆಲ್ಲರೂ ಒಡಿಶಾ ಮೂಲದ ಕೂಲಿ ಕಾರ್ಮಿಕರು ಎಂದು ತಿಳಿದುಬಂದಿದೆ.
ಅಗ್ನಿ ಶಾಮಕದಳದ ಸಿಂಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಅವಘಡಕ್ಕೆ ಕಾರಣವಾದವರನ್ನು ಶೀಘ್ರ ಬಂಧಿಸುವುದಾಗಿ ತಿಳಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ 30 ಮಂದಿ ಕಾರ್ಮಿಕರು ಸ್ಥಳದಲ್ಲಿದ್ದರು. ಸ್ಫೋಟದ ರಭಸಕ್ಕೆ ಅಸುನೀಗಿದವರ ದೇಹದ ಭಾಗಗಳು ಸಿಡಿದು ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆ ನಡೆದ 10 ಕಿಮೀ ವ್ಯಾಪ್ತಿಯಲ್ಲಿನ ಮನೆಗಳಲ್ಲಿ ಕಂಪನ ಅನುಭವವಾಗಿದೆ. ಅಕ್ರಮವಾಗಿ ಈ ಕ್ವಾರಿಯನ್ನು ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.