ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಐವರು ಆರೋಪಿಗಳ ಬಂಧನ

 

ಬೆಂಗಳೂರು, ಆ.4-ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಐವರು ಆರೋಪಿಗಳನ್ನು ಭಾರತಿನಗರ ಠಾಣೆ ಪೆÇಲೀಸರು ಬಂಧಿಸಿ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಾಜಿನಗರದ ಫಾರೂಕ್ (24), ನದೀಮ್ ಅಹಮ್ಮದ್(21), ಜವಾದ್ ಅಲಿ(21), ಕೆ.ಜಿ.ಹಳ್ಳಿಯ ಲಿಂಗರಾಜಪುರದ ನದೀಮ್‍ಖಾನ್(22) ಹಾಗೂ ಭಾರತೀನಗರ ನೆಹರುಪುರಂನ ರತನ್ ಅಲಿಯಾಸ್ ಕಾಕಾ(20) ಬಂಧಿತ ಆರೋಪಿಗಳು.
ಆರೋಪಿಗಳೆಲ್ಲರೂ ಸ್ನೇಹಿತರಾಗಿದ್ದು, ಹಣ ಸಂಪಾದನೆ ಮಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಒಡವೆ, ವಸ್ತುಗಳನ್ನು ದರೋಡೆ ಮಾಡಲು ಸಂಚು ರೂಪಿಸಿದ್ದರು.
ಬಂಧಿತರಿಂದ ನಾಲ್ಕು ಲಕ್ಷ ಮೌಲ್ಯದ ಎರಡು ಚಿನ್ನದ ಚೈನ್, ವಿವಿಧ ಕಂಪೆನಿಯ 14 ಕೈಗಡಿಯಾರ ಹಾಗೂ ಒಂದು ಕ್ಯಾಮೆರಾವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಜೂ.25ರಂದು ಸಂಜೆ ಎಚ್‍ಬಿಆರ್ ಲೇಔಟ್, 5ನೇ ಬ್ಲಾಕ್, 15ನೇ ಮುಖ್ಯರಸ್ತೆಯಲ್ಲಿರುವ ಸಾಯಿಸುಮಾ ಅಪಾರ್ಟ್‍ಮೆಂಟ್‍ನ ಮನೆಯೊಂದರಲ್ಲಿ ನೀರು ಕೇಳುವ ನೆಪದಲ್ಲಿ ಹೋಗಿ ಸಿ.ಜೋನಾಥನ್‍ಥಾಮಸ್ ಎಂಬುವರಿಗೆ ಚಾಕು ತೋರಿಸಿ ಬೆದರಿಸಿ ಮನೆಯಲ್ಲಿದ್ದ ಎರಡು ಚಿನ್ನದ ಚೈನ್, ಪರ್ಸ್‍ನಲ್ಲಿದ್ದ 1500ರೂ., ಕಬೋರ್ಡ್‍ನಲ್ಲಿದ್ದ ವಿವಿಧ ಕಂಪೆನಿಯ 14 ಕೈ ಗಡಿಯಾರುಗಳು, ಒಂದು ಕ್ಯಾಮೆರಾ ಮತ್ತು ಫರ್‍ಫ್ಯೂಮ್‍ನನ್ನು ದರೋಡೆ ಮಾಡಿ ಪರಾರಿಯಾಗಿದ್ದರು.
ಪೂರ್ವ ವಿಭಾಗದ ಅಪರ ಪೆÇಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್, ಡಿಸಿಪಿ ಅಜಯ್ ಹಿಲೋರಿ ಅವರ ಮಾರ್ಗದರ್ಶನದಲ್ಲಿ ಪುಲಕೇಶಿನಗರ ಉಪವಿಭಾಗದ ಎಸಿಪಿ ಎಸ್.ರಮೇಶ್‍ಕುಮಾರ್ ನೇತೃತ್ವದಲ್ಲಿ ಭಾರತಿನಗರ ಠಾಣೆ ಇನ್ಸ್‍ಪೆಕ್ಟರ್ ಪಿ.ವೀರೇಂದ್ರಕುಮಾರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ