ಶ್ರೀ ಮಲೆ ಮಹದೇಶ್ವರ ಸ್ವಾಮಿ ಸೇವಾ ಅಭಿವೃದ್ಧಿ ಪ್ರಾಧಿಕಾರದಲ್ಲಿ 20 ಕೋಟಿಗೂ ಹೆಚ್ಚು ಹಣ ಲೂಟಿ

 

ಬೆಂಗಳೂರು, ಆ.3- ಶ್ರೀ ಮಲೆ ಮಹದೇಶ್ವರ ಸ್ವಾಮಿ ಸೇವಾ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಲೂಟಿಯಾಗುತ್ತಿದ್ದು, 20 ಕೋಟಿಗೂ ಹೆಚ್ಚು ಹಣವನ್ನು ಅಧಿಕಾರಿಗಳು ಗುಳುಂ ಮಾಡಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಎಸಿಬಿಯಲ್ಲಿ ದೂರು ದಾಖಲಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಈ ಸಂಬಂಧ ಸುಮಾರು 800 ಪುಟಗಳಷ್ಟು ದಾಖಲೆ ಬಿಡುಗಡೆ ಮಾಡಿರುವ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಪರ ಜಿಲ್ಲಾಧಿಕಾರಿ ಡಿ.ಭಾರತಿ, ಉಪಕಾರ್ಯದರ್ಶಿ ಎನ್.ಬಸವರಾಜು, ಲೆಕ್ಕ ಅಧೀಕ್ಷಕ ಮಹದೇವಸ್ವಾಮಿ ಮತ್ತು ಮಹೇಶ್‍ಕುಮಾರ್ ಅವರು ಸೇರಿಕೊಂಡು ದೇವಸ್ಥಾನಕ್ಕೆ ಭಕ್ತರು ಹರಕೆ ರೂಪದಲ್ಲಿ ಅರ್ಪಿಸುತ್ತಿದ್ದ ಕೋಟ್ಯಂತರ ಹಣವನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದ್ದು, ಈ ಸಂಬಂಧ ದೂರು ನೀಡಿದ್ದಾರೆ.
ಭಕ್ತರು ಹರಕೆ ರೂಪದಲ್ಲಿ ಅರ್ಪಿಸುತ್ತಿರುವ ಮುಡಿಗಳನ್ನು ಮಾರಾಟ ಮಾಡುವ ಟೆಂಡರ್ ಪ್ರಕ್ರಿಯೆಯಲ್ಲಿ ಲೂಟಿ, ಸಂಭಾವನೆ ವೇತನ ಪಡೆಯುವ ನೌಕರರ ಹೆಸರಲ್ಲಿ ಲೂಟಿ, ವಸತಿಗೃಹ ಕೊಠಡಿಗಳ ಬಾಡಿಗೆ, ಅನ್ನದಾಸೋಹದ ಆಹಾರ ಪದಾರ್ಥಗಳ ಖರೀದಿ, ಲಾಡುಗಳ ತಯಾರಿಕೆ, ದೇವಾಲಯದ ಬಸ್‍ಗಳಿಗೆ ಡೀಸೆಲ್ ಖರೀದಿ, ಟಯರ್-ಟ್ಯೂಬ್‍ಗಳ ಖರೀದಿ, ಹಳೆ ಟಯರ್‍ಗಳ ಮಾರಾಟ, ಬ್ಯಾಟರಿಗಳ ಖರೀದಿ, ನಕಲಿ ಬಿಲ್ ತಯಾರಿಕೆಗಳ ಮೂಲಕ ಬಸ್‍ಗಳ ನಿರ್ವಹಣೆ, ಹಳೆ ಬ್ಯಾಟರಿಗಳ ಮಾರಾಟ ಪ್ರಕ್ರಿಯೆ ಸೇರಿದಂತೆ ಎಲ್ಲ ವಿಭಾಗದಲ್ಲೂ ಭಾರೀ ಪ್ರಮಾಣದಲ್ಲಿ ಅವ್ಯವಹಾರ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕ್ಷೇತ್ರದಲ್ಲಿ ಸಾವಿರಾರು ಮಂದಿ ಭಕ್ತರಿಗೆ ತಯಾರಿಸಲಾಗುವ ಅನ್ನ ದಾಸೋಹಕ್ಕೆ ಬಳಸುವ ಬೇಳೆ ಮೊದಲಾದ ದವಸ-ಧಾನ್ಯಗಳ ಖರೀದಿಯಲ್ಲೂ ಕೂಡ ಕೋಟ್ಯಂತರ ರೂ. ಹಣವನ್ನು ಗುಳುಂ ಮಾಡಿದ್ದಾರೆ.
ಪ್ರತಿನಿತ್ಯ ಭಕ್ತರು ಮತ್ತು ದೇವಾಲಯದ ಸುತ್ತಮುತ್ತಲ ಹಳ್ಳಿಗಳ ರೈತರು ನೀಡುವ ಹತ್ತಾರು ಟನ್‍ಗಳಷ್ಟು ತೂಕದ ಉತ್ತಮ ಗುಣಮಟ್ಟದ ಅಕ್ಕಿ, ಗೋಧಿ, ತೊಗರಿ ಬೇಳೆ ಮೊದಲಾದ ದವಸ-ಧಾನ್ಯಗಳನ್ನು ಮಾರಾಟ ಮಾಡಿ ಕಳಪೆ ಗುಣಮಟ್ಟದ ದವಸ-ಧಾನ್ಯಗಳನ್ನು ಉಗ್ರಾಣದಲ್ಲಿ ಸಂಗ್ರಹ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ತುಮಕೂರಿನ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದಿಂದ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಕ್ಕೆ ಸೇರಿದ ಬಸ್‍ಗಳ ಟಿಕೆಟ್‍ಗಳ ತಪಾಸಣೆ ಮಾಡುವ ಕರ್ತವ್ಯಕ್ಕೆ ತಾತ್ಕಾಲಿಕವಾಗಿ ವರ್ಗಾವಣೆಯಾಗಿದ್ದ ಉಪ ಕಾರ್ಯದರ್ಶಿ ಎಂ.ಬಸವರಾಜು ಅಧೀಕ್ಷಕ ಹುದ್ದೆಗೆ ವಾಪಸಾಗಲೇ ಇಲ್ಲ. ಲೂಟಿಯಲ್ಲಿ ತೊಡಗಿದರು ಎಂದು ಅವರು ದೂರಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಭಾರತಿ ವಿರುದ್ಧ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರಕ್ಕೆ ಕುಮ್ಮಕ್ಕು, ಕಾನೂನು ಬಾಹಿರ ನಿರ್ಣಯ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಎಂ.ಬಸವರಾಜ್, ಮಹದೇವಸ್ವಾಮಿ, ಮಹೇಶ್‍ಕುಮಾರ್ ವಿರುದ್ಧ ವಂಚನೆ, ನಕಲಿ ದಾಖಲೆ ತಯಾರಿಕೆ, ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಿರುವ ಅವರು ಈ ಬೃಹತ್ ಹಗರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಎನ್.ಆರ್.ರಮೇಶ್ ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ